ಕ್ರೀಡೆಪ್ರಮುಖ ಸುದ್ದಿ

ಪಣಿಯರವರ ಎಂ.ಮೋನಿಕಾ ‘ಖೇಲೋ ಇಂಡಿಯಾ’ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ

ರಾಜ್ಯ( ಮಡಿಕೇರಿ) ಜ.3 :- ದೇವರಪುರ ಸಮೀಪದ ಹೆಬ್ಬಾಲೆ ಗ್ರಾಮದ ಪರಿಶಿಷ್ಟ ಪಂಗಡದ ಪಣಿಯರವರ ಎಂ.ಮೋನಿಕಾ ಈಗ 6ನೇ ತರಗತಿ ವಿದ್ಯಾರ್ಥಿನಿ. ಒಂದು ಶಾಲೆಯ ಬೋಧಕ, ಬೋಧಕೇತರ ವರ್ಗ ಮಕ್ಕಳಿಗೆ ಉತ್ತೇಜನ ನೀಡಿದರೆ ಎಂತಹಾ ಸಾಧನೆಯನ್ನೂ ಮಾಡಬಹುದು ಎಂಬದಕ್ಕೆ ಈ ಬಾಲಕಿ ಸಾಕ್ಷಿ.
ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಮೋನಿಕಾ ಇದೇ ಜನವರಿ 14 ರ ನಂತರ ಆರಂಭವಾಗುವ ‘ಖೇಲೋ ಇಂಡಿಯಾ’ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.
ವೀರಾಜಪೇಟೆ ಸಮೀಪ ಬಾಳುಗೋಡು ಏಕಲವ್ಯ ವಸತಿ ಶಾಲೆಯಲ್ಲಿ 6 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪಿ.ಎಂ.ಮೋನಿಕಾ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಮಧ್ಯಪ್ರದೇಶದ ಭೂಪಾಲ್‍ನಲ್ಲಿ ಜರುಗಿದ 2018-19 ನೇ ಸಾಲಿನ ರಾಷ್ಟ್ರ ಮಟ್ಟದ ಏಕಲವ್ಯ ವಸತಿ ಶಾಲೆಗಳ ಕ್ರೀಡಾಕೂಟದಲ್ಲಿ ಎತ್ತರ ಜಿಗಿತದಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದು, ಇದೀಗ ಖೇಲೋ ಇಂಡಿಯಾಗೆ ಆಯ್ಕೆಯಾಗಿದ್ದಾಳೆ.
ಹೆಬ್ಬಾಲೆ ಗ್ರಾಮದ ಪಿ.ಎಚ್.ಮುತ್ತ ಮತ್ತು ಕಾಳಿ ದಂಪತಿಯ 9ನೇ ಪುತ್ರಿ ಮೋನಿಕಾ, ಕರ್ನಾಟಕ ವಸತಿ ಸಂಸ್ಥೆಗಳ ಸಂಘ ಹಾಗೂ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಬಾಳುಗೋಡು ಏಕಲವ್ಯ ಶಾಲೆಯ ದೈಹಿಕ ಶಿಕ್ಷಕ ಪಿ.ವಿ.ಸುರೇಶ್, ಪ್ರಾಂಶುಪಾಲ ಯೋಗ ನರಸಿಂಹ ಸ್ವಾಮಿ, ಶಿಕ್ಷಕ ವರ್ಗ, ಬೋಧಕೇತರ ಸಿಬ್ಬಂದಿ ಹಾಗೂ ಸಹಪಾಠಿಗಳ ಉತ್ತೇಜನದಿಂದಾಗಿ ಕಿರಿಯ ವಯಸ್ಸಿನಲ್ಲಿಯೇ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದು, ಖೇಲೋ ಇಂಡಿಯಾ ರಾಷ್ಟ್ರೀಯ ಕ್ರೀಡೆಯಲ್ಲಿಯೂ ಚಿನ್ನದ ಪದಕ ಗೆದ್ದು ಬರಲಿ ಎಂದು ಬಾಳುಗೋಡು ವಸತಿ ಶಾಲೆಯ ಬಳಗ ಶುಭ ಹಾರೈಸಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: