ಕ್ರೀಡೆ

ಟೇಬಲ್ ಟೆನ್ನಿಸ್ ಶ್ರೇಯಾಂಕ: ಅಗ್ರಸ್ಥಾನದಲ್ಲಿ ಮಾನವ್ ಠಕ್ಕರ್

ನವದೆಹಲಿ,ಜ.4-ಟೇಬಲ್ ಟೆನ್ನಿಸ್ ನ 21 ವಯೋಮಿತಿ ಶ್ರೇಯಾಂಕದಲ್ಲಿ ಭಾರತದ ಯುವ ಆಟಗಾರ ಮಾನವ್ ಠಕ್ಕರ್ ಒಂಬತ್ತು ಸ್ಥಾನಗಳಲ್ಲಿ ಜಿಗಿದು ಅಗ್ರ ಸ್ಥಾನ ಅಲಂಕರಿಸಿದ್ದಾರೆ.

ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಒಕ್ಕೂಟ ಬಿಡುಗಡೆ ಮಾಡಿರುವ ಶ್ರೇಯಾಂಕದಲ್ಲಿ ಮಾನವ್ ಠಕ್ಕರ್ ಅಗ್ರಸ್ಥಾನದಲ್ಲಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೆನಡಾದ ಐಟಿಟಿಎಫ್ ಚಾಲೆಂಜ್ ಪ್ಲಸ್ ಬೆನೆಮ್ಯಾಕ್ಸ್‌-ವರ್ಗೋ ನಾರ್ಥ್ ಅಮೆರಿಕನ್ ಓಪನ್ 21 ವಯೋಮಿತಿ ಸಿಂಗಲ್ಸ್‌ ವಿಭಾಗದಲ್ಲಿ 19ರ ಪ್ರಾಯದ ಮಾನವ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಇವರು ಫೈನಲ್ ಹಣಾಹಣಿಯಲ್ಲಿ ಮಾರ್ಟಿನ್ ವಿರುದ್ಧ 11-3, 11-5, 11-6 ಅಂತರದಲ್ಲಿ ಗೆಲುವು ಸಾಧಿಸಿದ್ದರು. ಹರ್ಮೀತ್ ದೇಸಾಯಿ, ಜಿ. ಸತ್ಯಯಿನ್ ಹಾಗೂ ಸೌಮ್ಯಜಿತ್ ಘೋಷ್ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ಟೇಬಲ್ ಟೆನ್ನಿಸ್ ಆಟಗಾರ ಎಂಬ ಹಿರಿಮೆಗೆ ಮಾನವ್ ಭಾಜನರಾಗಿದ್ದಾರೆ.

2018ರ ಫೆಬ್ರವರಿಯಲ್ಲಿಯೂ ಠಕ್ಕರ್ ಅವರು 18 ವಯೋಮಿತಿ ಶ್ರೇಯಾಂಕದಲ್ಲೂ ಅಗ್ರ ಸ್ಥಾನ ಪಡೆದಿದ್ದರು. ಜಕಾರ್ತದಲ್ಲಿ ನಡೆದಿದ್ದ 2018ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ಪುರುಷರ ತಂಡದಲ್ಲಿ ಜುನೇದ್ ಸ್ಥಾನ ಪಡೆದಿದ್ದರು. (ಎಂ.ಎನ್)

Leave a Reply

comments

Related Articles

error: