ದೇಶ

ನಟಿ, ಶಾಸಕಿ ರೋಜಾ ಮೇಲೆ ಹಲ್ಲೆಗೆ ಯತ್ನ

ಆಂಧ್ರಪ್ರದೇಶ,ಜ.6-ನಟಿ, ಶಾಸಕಿ ರೋಜಾ ಮೇಲೆ ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

ಚಿತ್ತೂರು ಜಿಲ್ಲೆಯಲ್ಲಿ ಹೊಸದಾಗಿ ಕಟ್ಟಲ್ಪಟ್ಟಿರುವ ನೂತನ ಗ್ರಾಮ ಪಂಚಾಯಿತಿ ನೂತನ ಕಚೇರಿಯ ಉದ್ಘಾಟನೆಗೆ ರೋಜಾ ಆಗಮಿಸಿದ್ದ ವೇಳೆ ಸ್ವಪಕ್ಷೀಯರೇ ಹಲ್ಲೆ ನಡೆಸಲು ಯತ್ನಿಸಿದ್ದಾರೆ.

ನಟಿ ರೋಜಾ ಆಂಧ್ರಪ್ರದೇಶದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಗನ್ಮೋಹನ್​ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಪ್ರವೇಶ ಮಾಡಿದ್ದರು. ಅಲ್ಲದೆ, ನಗರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು.

ಪ್ರಸ್ತುತ ನಗರಿ ಕ್ಷೇತ್ರದ ಶಾಸಕಿಯಾಗಿ, ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸುತ್ತಿದ್ದ ಅವರನ್ನು ಇತ್ತೀಚೆಗೆ ಆಂಧ್ರಪ್ರದೇಶ ರಾಜ್ಯದ ಕೈಗಾರಿಕಾ ಮೂಲ ಸೌಕರ್ಯ ನಿಗಮದ ಅಧ್ಯಕ್ಷೆಯಾಗಿಯೂ ನೇಮಕ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕಿ ನಟಿ ರೋಜಾ ಅವರನ್ನು ಚಿತ್ತೂರು ಜಿಲ್ಲೆಯಲ್ಲಿ ಹೊಸದಾಗಿ ಕಟ್ಟಲ್ಪಟ್ಟಿರುವ ನೂತನ ಗ್ರಾಮ ಪಂಚಾಯಿತಿ ಕಚೇರಿಯ ಉದ್ಘಾಟನೆಗೆ ಆಹ್ವಾನಿಸಲಾಗಿತ್ತು.

ನೂತನ ಕಟ್ಟಡದ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಅದೇ ಊರಿನ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಯೂನಿಯನ್ ಸಮಿತಿ ಸದಸ್ಯ ಅಮ್ಮುಲಿನ್ ಎಂಬಾತನ 200ಕ್ಕೂ ಹೆಚ್ಚು ಬೆಂಬಲಿಗರು ರೋಜಾ ಅವರ ಕಾರನ್ನು ತಡೆದಿದ್ದಾರೆ. ಅಲ್ಲದೆ, ರೋಜಾ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಅವರ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ.

ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸಪಟ್ಟ ಪೊಲೀಸರು ಕೊನೆಗೂ ರೋಜಾ ಅವರನ್ನು ಸುರಕ್ಷಿತವಾಗಿ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಸ್ದಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ನಟಿ ರೋಜಾ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕ ಅಮ್ಮುಲಿನ್ ನಡುವೆ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಶೀತಲ ಸಮರವೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ನಟಿ ರೋಜಾ, ನನ್ನ ಮೇಲೆ ಹಲ್ಲೆಗೆ ಮುಂದಾದವರು ವಿರೋಧ ಪಕ್ಷವಾದ ತೆಲುಗು ದೇಶಂ ಪಕ್ಷದ ಕಾರ್ಯಕರ್ತರು. ವೈಎಸ್‌ಆರ್ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಇದೆ ಎಂದು ಬಿಂಬಿಸುವ ಸಲುವಾಗಿ ಹೀಗೆ ಮಾಡಲಾಗಿದೆ ಎಂದು ಹೇಳುವ ಮೂಲಕ ಪಕ್ಷದ ಆತಂರಿಕ ಬಿಕ್ಕಟ್ಟಿಗೆ ತೇಪೆ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. (ಎಂ.ಎನ್)

Leave a Reply

comments

Related Articles

error: