ದೇಶಪ್ರಮುಖ ಸುದ್ದಿ

ಬೆರಳಚ್ಚು ನೀಡಿ ಹಣ ಪಾವತಿ: ಆಧಾರ್‌ ಪಾವತಿಗೆ ಕೇಂದ್ರ ಸರ್ಕಾರ ಅಧಿಕೃತ ಚಾಲನೆ

ನವದೆಹಲಿ : ಆಧಾರ್‌ ಸಂಖ್ಯೆ ಆಧರಿಸಿ ಹಣ ಪಾವತಿ ಮಾಡುವ ವ್ಯವಸ್ಥೆಗೆ ಕೇಂದ್ರ ಸರ್ಕಾರ ಮಂಗಳವಾರ ಚಾಲನೆ ನೀಡಿದೆ. ಸಿದ್ಧಪಡಿಸಲಾಗಿರುವ ಆ್ಯಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಆ್ಯಪ್‌ ‘ಆಧಾರ್‌ ಪೇ’ ಬಳಸಿ ಹಣ ಪಾವತಿಸಿದ್ದಕ್ಕೆ ಗ್ರಾಹಕರು ಶುಲ್ಕ ನೀಡಬೇಕಿಲ್ಲ.

ಖಾಸಗಿ ಸಂಸ್ಥೆಗಳ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿ ಮಾಡಿದಾಗ ಶುಲ್ಕ ಅನ್ವಯವಾಗುತ್ತದೆ. ಆದರೆ, ಈ ಆ್ಯಪ್‌ ಮೂಲಕ ಶುಲ್ಕ ರಹಿತ ವಹಿವಾಟು ಸಾಧ್ಯವಾಗಿದೆ. ಗೂಗಲ್‌ ಪ್ಲೇ-ಸ್ಟೋರ್‌ನಲ್ಲಿ ಆ್ಯಪ್‌ ಲಭ್ಯವಿದ್ದು, ವ್ಯಾಪಾರಿಗಳು ಸ್ಮಾರ್ಟ್‌ಫೋನ್‍ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿ ಬಯೋಮೆಟ್ರಿಕ್‌ ರೀಡರ್‌ನೊಂದಿಗೆ ಸಂಪರ್ಕಿಸಬೇಕು. ಆಧಾರ್‌ ಸಂಖ್ಯೆ ನಮೂದಿಸಿ, ಪಾವತಿಗೆ ಬಳಸುವ ಬ್ಯಾಂಕ್‌ ಆಯ್ಕೆ ಮಾಡಬೇಕು.

ಬಯೋಮೆಟ್ರಿಕ್‌ ಮೂಲಕ ಆಗುವ ಬೆರಳಿನ ಸ್ಕ್ಯಾನ್‌ ಪಾಸ್‌ವರ್ಡ್‌ ಆಗಿ ಬಳಕೆಯಾಗುತ್ತದೆ.

ಡಿಜಿಟಲ್‌ ಪಾವತಿ ಮತ್ತು ನಗದು ರಹಿತ ಪಾವತಿ ವ್ಯವಸ್ಥೆ ವ್ಯಾಪ್ತಿ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಹಿಂದೆಯೇ ಈ ಆ್ಯಪ್‌ ಬಿಡುಗಡೆ ಮಾಡಿತ್ತು.

2017–18ನೇ ಸಾಲಿನಲ್ಲಿ ವಿವಿಧ ಪಾವತಿ ವ್ಯವಸ್ಥೆಗಳ ಮೂಲಕ 25 ಶತಕೋಟಿ ಡಿಜಿಟಲ್‌ ವಹಿವಾಟಿನ ಗುರಿ ಹೊಂದಿದೆ. 2016ರ ಏಪ್ರಿಲ್‌ ವರೆಗೂ ಸರ್ಕಾರ 100 ಕೋಟಿ ಆಧಾರ್‌ ಕಾರ್ಡ್‌ಗಳನ್ನು ವಿತರಿಸಿದೆ. ಈಗಾಗಲೇ ಬ್ಯಾಂಕ್‌ ಖಾತೆಗಳೊಂದಿಗೆ 40 ಕೋಟಿ ಆಧಾರ್‌ ಕಾರ್ಡ್‌ಗಳನ್ನು ಸಂಪರ್ಕಿಸಲಾಗಿದೆ.

ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ (ಯುಐಡಿಎಐ), ರಾಷ್ಟ್ರೀಯ ಪಾವತಿ  ನಿಗಮ (ಎನ್‌ಪಿಸಿಐ) ಹಾಗೂ  ಐಡಿಎಫ್‌ಸಿ ಬ್ಯಾಂಕ್‌ ಜತೆಯಾಗಿ ಈ ಆ್ಯಪ್‌ ಅಭಿವೃದ್ಧಿಪಡಿಸಿವೆ.

Leave a Reply

comments

Related Articles

error: