ಪ್ರಮುಖ ಸುದ್ದಿ

ಗ್ರಾಮ ಲೆಕ್ಕಿಗರಿಗೆ ‘ವೃತ್ತಿ ಬುನಾದಿ ತರಬೇತಿ’ : ಸಾರ್ವಜನಿಕರ ಕಾರ್ಯಕ್ಕೆ ಆದ್ಯತೆ ನೀಡಿ : ಎಡಿಸಿ ಡಾ.ಸ್ನೇಹ ಸೂಚನೆ

ರಾಜ್ಯ( ಮಡಿಕೇರಿ) ಜ.7 :- ಸಾರ್ವಜನಿಕರು ಪ್ರತಿನಿತ್ಯದ ಕೆಲಸಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಕಂದಾಯ ಇಲಾಖೆಯನ್ನು ಅವಲಂಭಿಸಿದ್ದು, ಸಾರ್ವಜನಿಕರ ಕಾರ್ಯಕ್ಕೆ ಅಧಿಕಾರಿಗಳು ಆದ್ಯತೆ ನೀಡಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಅವರು ಸಲಹೆ ನೀಡಿದ್ದಾರೆ.
ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಗ್ರಾಮ ಲೆಕ್ಕಿಗರಿಗಾಗಿ ನಡೆದ ಕಂದಾಯ ವಿಷಯಗಳ ‘ವೃತ್ತಿ ಬುನಾದಿ ತರಬೇತಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ಜಾತಿ, ಆದಾಯ, ಆರ್‍ಟಿಸಿ ಹೀಗೆ ಹಲವು ರೀತಿಯ ಪ್ರಮಾಣ ಪತ್ರಗಳಿಗೆ ಹಾಗೂ ಕಂದಾಯಕ್ಕೆ ಸಂಬಂಧಿಸಿದಂತೆ ಹಲವು ಕೆಲಸಗಳಿಗೆ ಕಂದಾಯ ಕಚೇರಿಗೆ ಆಗಮಿಸುತ್ತಾರೆ. ಅಂತಹ ಸಂದರ್ಭದಲ್ಲಿ ಸಕಾಲದಲ್ಲಿ ಸೌಲಭ್ಯ ಕಲ್ಪಿಸುವುದು ಅಗತ್ಯ ಎಂದು ಅವರು ತಿಳಿಸಿದರು.
ತರಬೇತಿಯ ಸಮನ್ವಯ ಅಧಿಕಾರಿ ಬಿ.ಎಸ್.ಹಿರಿಯಣ್ಣ ಅವರು ಮಾತನಾಡಿ ಗ್ರಾಮ ಲೆಕ್ಕಿಗರು ಆಡಳಿತ ಸೇವೆಯಲ್ಲಿ ಭದ್ರ ಬುನಾದಿಯಾಗಿದ್ದು, ತಾವು ನೀಡುವ ವರದಿಗಳು, ಪ್ರಮಾಣ ಪತ್ರಗಳು, ಅತ್ಯಮೂಲ್ಯವಾಗಿವೆ. ಆ ನಿಟ್ಟಿನಲ್ಲಿ ನಿಖರ ಮಾಹಿತಿ ನೀಡಬೇಕು ಎಂದರು.
ಅನುಮಾನಗಳಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು.
ಭೂ ಕಂದಾಯ ಅಧಿನಿಯಮ ಅನುಸರಿಸಿ ಭೂಮಿ ತಂತ್ರಾಂಶ ಮತ್ತು ಮೋಜಿನಿ ತಂತ್ರಾಂಶ ಯೋಜನೆ, ಭೂ ದಾಖಲೆಗಳ ಗಣಕೀಕರಣ, ಏಕಕಾಲಕ್ಕೆ ನೋಂದಣಿ, ಕಂದಾಯ ಇಲಾಖೆ ಮತ್ತು ಭೂ ಮಾಪನ ಇಲಾಖೆಗಳ ನಡುವೆ ಸಮನ್ವಯ, ನೈಸರ್ಗಿಕ ವಿಕೋಪ ಪ್ರಕರಣಗಳ ನಿರ್ವಹಣೆ, ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕಡತ ತಯಾರಿಸುವುದು, ತುರ್ತು ಸನ್ನಿವೇಶದಲ್ಲಿ ಪರಿಹಾರ ಕೇಂದ್ರ ತೆರೆಯುವುದು, ಜನನ/ ಮರಣ ವಿವರಗಳನ್ನು ದಾಖಲಿಸುವ ವಿಧಾನ, ಸಾಮಾಜಿಕ ಭದ್ರತಾ ಯೋಜನೆಗಳಡಿ ತೊಡಗಿಸುವುದು, ವಹಿಗಳ ನಿರ್ವಹಣೆ, ಬೆಳೆ ಸಮೀಕ್ಷೆ, ಹೀಗೆ ಹಲವು ಕಾರ್ಯ ನಿರ್ವಹಿಸಬೇಕಿದೆ ಎಂದು ಅವರು ಹೇಳಿದರು.
ಸರ್ಕಾರದ ಕೆಲಸ ಮಾಡುವಾಗ ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನ ಹರಿಸುವುದು ಅತಿ ಮುಖ್ಯ. ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಂಡರೆ, ಕಠಿಣಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದರು. ತರಬೇತಿ ಕಾರ್ಯಗಾರದಲ್ಲಿ ಕಂದಾಯ ಇಲಾಖೆಯ 25 ಅಭ್ಯರ್ಥಿಗಳು ಭಾಗಿಯಾಗಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: