ಕರ್ನಾಟಕ

ಶಾಸಕ ಎಂ.ಪಿ.ರೇಣುಕಾಚಾರ್ಯ ಬಸ್ ಚಲಾಯಿಸಿದ್ದಕ್ಕೆ ಡಿಪೋ ಮ್ಯಾನೇಜರ್ ಗೆ ಬಂತು ನೋಟಿಸ್

ದಾವಣಗೆರೆ,ಜ.7-ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೆಎಸ್ಆರ್ ಟಿಸಿ ಬಸ್ ಚಾಲನೆ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಇದೀಗ ಡಿಪೋ ಮ್ಯಾನೇಜರ್ ಗೆ ನೋಟಿಸ್ ಬಂದಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಹೊಸ ಮಾರ್ಗದಲ್ಲಿ ಬಸ್ ಸಂಚಾರ ಆರಂಭದ ವೇಳೆ ರೇಣುಕಾಚಾರ್ಯ ಬಸ್ ಚಲಾಯಿಸಿದ್ದರು. ಇದೀಗ ಶಿವಮೊಗ್ಗದ ಕೆಎಸ್ಆರ್ ಟಿಸಿ ಡಿಸಿಟಿ ಆರ್.ನವೀನ್ ಕುಮಾರ್ ಘಟನೆ ಬಗ್ಗೆ ವಿವರಣೆ ಕೇಳಿ ಹೊನ್ನಾಳಿ ಘಟಕ ವ್ಯವಸ್ಥಾಪಕ ಮಹೇಶ್ವರಪ್ಪರಿಗೆ ನೋಟಿಸ್ ನೀಡಿದ್ದಾರೆ.

ಕಳೆದ ಭಾನುವಾರ ಎಂ.ಪಿ.ರೇಣುಕಾಚಾರ್ಯ ಗೊಲ್ಲರಹಳ್ಳಿ, ಬೆನಕಹಳ್ಳಿ, ಉಜ್ಜನಿಪುರ, ರಾಂಪುರ, ಸಾಸ್ವೇಹಳ್ಳಿ ಗ್ರಾಮಗಳ ಮಾರ್ಗವಾಗಿ ಹೊಸದಾಗಿ ಕೆಎಸ್ಆರ್ ಟಿಸಿ ಬಸ್ ಚಾಲನೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ತಾವೇ ಚಾಲಕನ ಯೂನಿಫಾರಂ ಹಾಕಿಕೊಂಡು ಗ್ರಾಮಗಳಿಗೆ ಬಸ್ ಚಲಾಯಿಸಿದರು.

ರೇಣುಕಾಚಾರ್ಯ ಬಸ್ ಚಲಾಯಿಸಿದ್ದು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಶಾಸಕ ಎಂ.ಪಿ.ರೇಣುಕಾಚಾರ್ಯ ಚಾಲಕನ ಸಮವಸ್ತ್ರ ಧರಿಸಿ ಸುಮಾರು 60 ಕಿಮೀ ಬಸ್ ಓಡಿಸಿದ್ದರು. ಕೆಎಸ್ಆರ್ ಟಿಸಿ ಬಸ್ ಗಳನ್ನು ಕೇವಲ ನಿಗಮದ ಚಾಲಕರು ಹಾಗೂ ಇಲಾಖೆಯ ಪರವಾನಿಗೆ ಪಡೆದವರು ಚಲಾಯಿಸಬೇಕು ಅದಲ್ಲದೆ ಶಾಸಕರು ಪ್ರಯಾಣಿಕರನ್ನು ಕೂರಿಸಿಕೊಂಡು ಬಸ್ ಚಲಾಯಿಸಿರುವುದಕ್ಕೆ ವಿವರಣೆ ನೀಡುವಂತೆ ಕೆಎಸ್ಆರ್ ಟಿಸಿ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಸ್ವಪ್ರೇರಣೆಯಿಂದ ಹೊನ್ನಾಳಿ ಘಟಕ ವ್ಯವಸ್ಥಾಪಕ ಮಹೇಶ್ವರಪ್ಪ ಅವರಿಗೆ ನೋಟಿಸ್ ನೀಡಿದ್ದಾರೆ. (ಎಂ.ಎನ್)

Leave a Reply

comments

Related Articles

error: