ಮೈಸೂರು

ಜೆಎನ್‍ಯು ಆವರಣದಲ್ಲಿ ಮುಸುಕುಧಾರಿಗಳು ನಡೆಸಿದ ದಾಂದಲೆಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ಗೂ ಯಾವುದೇ ಸಂಬಂಧವಿಲ್ಲ : ಹರ್ಷ ನಾರಾಯಣ್

ಮೈಸೂರು,ಜ.7:-  ದೆಹಲಿಯ ಜೆಎನ್‍ಯು ಆವರಣದಲ್ಲಿ ಮುಸುಕುಧಾರಿಗಳು ನಡೆಸಿದ ದಾಂದಲೆಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ಗೂ ಯಾವುದೇ ಸಂಬಂಧವಿಲ್ಲ. ಆದರೂ ಘಟನೆ ಕುರಿತಂತೆ ಸಂಬಂಧಿಸಿದವರು ನಿಸ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಸಂಘಟನೆ ವತಿಯಿಂದ ಇದೇ ಜ. 18 ಮತ್ತು 19 ರಂದು ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಹಮ್ಮಿಕೊಂಡಿರುವ ವಿದ್ಯಾರ್ಥಿ ಸಂಸ್ಕೃತಿ ಚಳವಳಿ ಕುರಿತ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಗೂಂಡಾಗಳಿಂದ ನಡೆದ ದಾಳಿಗೂ ಮುನ್ನ ಆ ವಿವಿಯ ಕೆಲ ಎಡ ಪಂಥೀಯ ವಿದ್ಯಾರ್ಥಿ ಮುಖಂಡರು ಆನ್ ಲೈನ್ ನೋಂದಣಿ ಕೇಂದ್ರದಲ್ಲಿ ದಾಂದಲೆ ನಡೆಸಿ ಅದನ್ನು ಮುಚ್ಚಿದ್ದೂ ಉಂಟು. ಆ ವೇಳೆ ಎಬಿವಿಪಿ ಸದಸ್ಯರಿಗೂ ಗಾಯಗಳಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ತಮ್ಮ ಸಂಘಟನೆ ಶಾಂತಿಯುತ ಹೋರಾಟದ ಮೂಲಕ ವಿದ್ಯಾರ್ಥಿಗಳ ಏಳಿಗೆಗೆ ಕಾರ್ಯ ನಿರ್ವಹಿಸುತ್ತಿರುವುದಾಗಿದ್ದು, ಜೆಎನ್‍ಯು ಘಟನೆಗೂ ಎಬಿವಿಪಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಕೇಂದ್ರ ಸಚಿವರು ಉನ್ನತ ಮಟ್ಟದ ಸಮಿತಿ ರಚಿಸಿ ತಪ್ಪಿತಸ್ಥರು ಯಾರೆಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲೆಂದು ಆಗ್ರಹಿಸಿದರು.

ಇದೇ ವೇಳೆ, ನಗರದಲ್ಲಿ ನಡೆಯುವ ಉತ್ಸವ ವೇಳೆ ಸ್ಪರ್ಧೆಗಳು, ವಿದ್ಯಾರ್ಥಿ ಚಳವಳಿ ಒಂದು ಅವಲೋಕನ ಕುರಿತ ವಿಚಾರ ಸಂಕಿರಣ, ವಿದ್ಯಾರ್ಥಿ ಸಂಸ್ಕೃತಿ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ, ದಿವ್ಯಾಂಗ ಪ್ರತಿಭೆಗಳಿಗೆ, ಸಾಮಾಜಿಕ ನೇತತೃತ್ವದ ವಿದ್ಯಾರ್ಥಿಗಳಿಗೆ ಸನ್ಮಾನ, ಮೊದಲಾದವು ನಡೆಯಲಿವೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಕೇಶ್, ಗೌತಂ, ಶರತ್, ಪ್ರಜ್ಞಾ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: