ಮೈಸೂರು

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಭರದ ಸಿದ್ಧತೆ

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಮೈಸೂರು ಜಿಲ್ಲೆಯಲ್ಲಿ ಸಕಲ ಸಿದ್ದತೆಯನ್ನು ನಡೆಸಲಾಗುತ್ತಿದೆ.
ಮೈಸೂರು ಜಿಲ್ಲೆಯಾದ್ಯಂತ ಒಟ್ಟು 36,891 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

ಮೈಸೂರು ನಗರ ವ್ಯಾಪ್ತಿಯಲ್ಲಿ 26 ಪರೀಕ್ಷಾ ಕೇಂದ್ರಗಳು, ತಾಲೂಕುಗಳ ವ್ಯಾಪ್ತಿಯಲ್ಲಿ 24 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ.

ಕಳೆದ ವರ್ಷ ಪ್ರಶ್ನೆ ಪತ್ರಿಕೆಗಳು ಬಹಿರಂಗವಾಗಿದ್ದರ ಹಿನ್ನೆಲೆಯಲ್ಲಿ ಈ ಬಾರಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೈಸೂರು ಜಿಲ್ಲೆಯ 18 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದೆ. ಸಾಮೂಹಿಕ ನಕಲು ತಡೆಗೆ ತ್ರಿಕೋನ ಪರೀಕ್ಷಾ ಕೇಂದ್ರ ಪದ್ದತಿ ಅಳವಡಿಸಲಾಗಿದೆ. ಪ್ರಶ್ನೆ ಪತ್ರಿಕೆ ಬಂಡಲ್ ಗಳಿಗೆ ಬಾರ್ ಕೋಡಿಂಗ್ ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷೆಯ ದಿನದಂದೇ ಭದ್ರತಾ ಕೊಠಡಿಯಿಂದ ಪ್ರಶ್ನೆ ಪತ್ರಿಕೆಗಳು ಪರೀಕ್ಷಾ ಕೇಂದ್ರಕ್ಕೆ ರವಾನೆ ಮಾಡಲು ಸಿದ್ಧತೆ ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಇರಿಸಿರುವ ಭದ್ರತಾ ಖಜಾನೆ ಬಳಿ ಸಿಸಿ ಕ್ಯಾಮರಾ, ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲಾಗಿದ್ದು, ಭದ್ರತಾ ಸಿಬ್ಬಂದಿಗೆ ಗುರುತಿನ ಪತ್ರ ವಿತರಿಸಲಾಗಿದೆ.
ಈ ಬಾರಿಯ ಪರೀಕ್ಷಾ ಸಮಯ ಬದಲಾಗಿದ್ದು ಬೆಳಿಗ್ಗೆ 9 ಗಂಟೆಗೆ ಬದಲಾಗಿ 10:15ಕ್ಕೆ ಆರಂಭವಾಗಲಿದೆ. ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಾಳೆ ಜೀವಶಾಸ್ತ್ರ ಮತ್ತು ಇತಿಹಾಸ ವಿಷಯಗಳ ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:30 ರವರೆಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
36,891 ವಿದ್ಯಾರ್ಥಿಗಳ ಪೈಕಿ, 30,115 ಹೊಸಬರು, 5216 ರಿಪೀಟರ್ ಗಳು, 1560 ಖಾಸಗಿ ವಿದ್ಯಾರ್ಥಿಗಳಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 11,905 ವಿದ್ಯಾರ್ಥಿಗಳು,
ಕಲಾ ವಿಭಾಗದಲ್ಲಿ 12,833 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 12,153 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

Leave a Reply

comments

Related Articles

error: