ಮೈಸೂರು

ಆದರ್ಶ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ  ಹಿನ್ನೆಲೆ : ಶಾಲೆಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಭೇಟಿ ನೀಡಿ ಪರಿಶೀಲನೆ ; ಸಿಬ್ಬಂದಿಗಳ ತರಾಟೆ

ಮೈಸೂರು,ಜ.8:- ಹೆಚ್.ಡಿ.ಕೋಟೆ ಪಟ್ಟಣದ ಆದರ್ಶ ಶಾಲೆಯಲ್ಲಿ ಸೋಮವಾರ ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ   ಹಿನ್ನೆಲೆಯಲ್ಲಿ ನಿನ್ನೆ  ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು  ಹುಳುಮಿಶ್ರಿತ ಅಡುಗೆ ಮಾಡಲು ಕಾರಣರಾದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಹಾಗೂ ಜಿಲ್ಲೆಯಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಬೆಳಿಗ್ಗೆಯೇ ಅಧಿಕಾರಿಗಳ ಜತೆ ಶಾಲೆಗೆ ಬಂದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್  ಸುಮಾರು 2 ತಾಸಿಗೂ ಅಧಿಕ ಕಾಲ ಪರಿಶೀಲನೆ ನಡೆಸಿ, ಅಲ್ಲಿನ ಸಿಬ್ಬಂದಿ ಹಾಗೂ ಮಕ್ಕಳಿಂದ ಮಾಹಿತಿ ಪಡೆದರು.  ಆಹಾರ ಶೇಖರಣಾ ಕೊಠಡಿಗೆ ಭೇಟಿ ಕೊಟ್ಟಾಗ ಅಲ್ಲಿ ಬೇಳೆ ಹಾಗೂ ಅಕ್ಕಿಯಲ್ಲಿ ಹುಳು ಹಾಗೂ ಅವಧಿ ಮೀರಿದ ಹಾಲಿನ ಪೌಡರ್ ಕಂಡು ಬಂತು.

ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು ಇಷ್ಟೊಂದು ಹುಳುಗಳು ಇರುವ ಆಹಾರ ಪದಾರ್ಥಗಳನ್ನು ಯಾಕೆ ಅಡುಗೆಗೆ ಬಳಸುತ್ತಿದ್ದೀರಾ ಮತ್ತು ಅವಧಿ ಮೀರಿದ ಹಾಲಿನ ಪೌಡರ್ ಏಕೆ ಇಟ್ಟುಕೊಂಡಿದ್ದೀರಾ  ಎಂದು ತರಾಟೆಗೆ ತೆಗೆದುಕೊಂಡರು.

ಅಡುಗೆ ಕೋಣೆಗೆ ತೆರಳಿ ಅಡುಗೆ ಸಿಬ್ಬಂದಿಯಿಂದ ಮಾಹಿತಿ ಪಡೆದಾಗ ಬೇಳೆ ಕಾಳುಗಳಲ್ಲಿ ಹುಳುಗಳು ಇರುವ ಬಗ್ಗೆ ಮುಖ್ಯ ಶಿಕ್ಷಕರ ಗಮನಕ್ಕೆ ತರಲಾಗಿತ್ತು. ಆದರೆ ಅವರು ಅದನ್ನು ಶುಚಿಗೊಳಿಸಿ ಬಳಸುವಂತೆ ತಿಳಿಸಿದ್ದರು ಎಂದು  ಸಿಬ್ಬಂದಿ ತಿಳಿಸಿದರು. ಏಳನೇ ತರಗತಿ ಕೊಠಡಿಗೆ ತೆರಳಿ ಪ್ರಕರಣದ ಕುರಿತು ಮಕ್ಕಳಿಂದ ಮಾಹಿತಿ ಪಡೆದರು.

ಜಿಲ್ಲಾಧಿಕಾರಿಗಳು ಪಾಲಕರೊಂದಿಗೆ ಸಭೆ ನಡೆಸಿದ ವೇಳೆ ಪಾಲಕರು ಶಾಲೆಯಲ್ಲಿ ಮೊದಲಿನಿಂದಲೂ ಅಡುಗೆಗೆ ಕಳಪೆ ಆಹಾರ ಪದಾರ್ಥ ಬಳಸಲಾಗುತ್ತಿದೆ. ಇಲ್ಲಿ  ರುಚಿಕರ ಊಟ ನೀಡುತ್ತಿಲ್ಲ. ವಾರಕ್ಕೊಮ್ಮೆ ತರಕಾರಿ ತಂದು ವಾರಪೂರ್ತಿ ಅಡುಗೆಗೆ ಅದನ್ನು ಬಳಕೆ ಮಾಡಲಾಗುತ್ತಿದೆ ಎಂಬ ಬಗ್ಗೆ ನಮ್ಮ ಮಕ್ಕಳು ಮನೆಗೆ ಬಂದಾಗ ದೂರು ಹೇಳುತ್ತಿದ್ದರು. ಈ ಬಗ್ಗೆ ಶಾಲೆಗೆ ಭೇಟಿ ನೀಡಿ ತಿಳಿವಳಿಕೆ ನೀಡಿದ್ದರೂ ಬದಲಾವಣೆ ಮಾಡಿಕೊಳ್ಳದೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.

ಸ್ಟಾಕ್ ಪುಸ್ತಕ ಪರಿಶೀಲನೆ ನಡೆಸಿದಾಗ ಡಿಸೆಂಬರ್ ತಿಂಗಳಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಜನವರಿ ತಿಂಗಳಲ್ಲಿ ಬಳಕೆ ಮಾಡಿರುವುದು ಕಂಡು ಬಂದಿದೆ. ಶಾಲೆಯಲ್ಲಿ ಶುಚಿತ್ವ ಕಾಪಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಈ ವೇಳೆ  ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಮ್, ಸದಸ್ಯ ವೆಂಕಟಸ್ವಾಮಿ, ಹುಣಸೂರು ಉಪವಿಭಾಗಾಧಿಕಾರಿ ವೀಣಾ, ಡಿಡಿಪಿಐ ಪಾಂಡುರಂಗ, ತಹಸೀಲ್ದಾರ್ ಆರ್.ಮಂಜುನಾಥ್, ಇಒ ರಾಮಲಿಂಗಯ್ಯ, ಬಿಇಒ ರೇವಣ್ಣ, ಡಾ.ರವಿಕುಮಾರ್, ಪುರಸಭಾ ಮುಖ್ಯಾಧಿಕಾರಿ ವಿಜಯ್ ಕುಮಾರ್, ಸಬ್‌ ಇನ್ಸಪೆಕ್ಟರ್ ಎಂ.ನಾಯಕ್, ಅಕ್ಷರ ದಾಸೋಹ ಎಡಿ ಸಿದ್ದರಾಜು, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗೇಶ್  ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: