ಮೈಸೂರು

ಕೊಲೆ ಯತ್ನ ಪ್ರಕರಣ : ಇಂದು ಆರೋಪಿ ಫರ್ಹಾನ್ ಪಾಷಾ ಗುರುತು  ಪತ್ತೆ ಹಚ್ಚಲಿರುವ ಶಾಸಕ ತನ್ವೀರ್ ಸೇಠ್

ಮೈಸೂರು,ಜ.9:- ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಇಂದು ಮಹತ್ವದ ದಿನವಾಗಿದ್ದು ಆರೋಪಿಯ‌ ಗುರುತು ಪತ್ತೆ ಹಚ್ಚಲು ಶಾಸಕರು​ ಮೈಸೂರಿಗೆ ಬಂದಿದ್ದಾರೆ.

ಆರೋಪಿ ಫರ್ಹಾನ್ ಪಾಷಾ ಗುರುತು  ಪತ್ತೆ ಹಚ್ಚಲು  ತನ್ವೀರ್ ಸೇಠ್ ಅವರು ಆಗಮಿಸಿದ್ದು,  ಇಂದು ಮೈಸೂರು ಜೈಲಿನಲ್ಲಿ ಆರೋಪಿ ಗುರುತು ಪತ್ತೆ ಹಚ್ಚಲಿದ್ದಾರೆ. ಶಾಸಕರ ಜತೆಗೆ 6 ಮಂದಿ ಪ್ರತ್ಯಕ್ಷದರ್ಶಿಗಳು ಹಾಗೂ ಇಬ್ಬರು ಪೊಲೀಸರು ಸ್ಥಳದಲ್ಲಿ ಹಾಜರಾಗುವ ಸಾಧ್ಯತೆ ಇದೆ.

ನವೆಂಬರ್ 18ರಂದು ಬನ್ನಿಮಂಟಪದಲ್ಲಿನ ಸಭಾಭವನವೊಂದರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಸಕ ತನ್ವೀರ್ ಸೇಠ್ ಮೇಲೆ ಕೊಲೆ ಯತ್ನ ನಡೆದಿತ್ತು. ಫರ್ಹಾನ್ ಪಾಷಾ ಚಾಕುವಿನಿಂದ ಕತ್ತಿನ ಭಾಗಕ್ಕೆ ಇರಿದಿದ್ದ. ಈ ವೇಳೆ ಕುತ್ತಿಗೆ ಭಾಗಕ್ಕೆ ಪೆಟ್ಟು ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ  ಶಾಸಕ ತನ್ವೀರ್ ಸೇಠ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಮೈಸೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಶಾಸಕ ತನ್ವೀರ್ ಸೇಠ್ ನಂತರ ವೈದ್ಯರ ಸಲಹೆ ಮೇರೆಗೆ ವಿದೇಶದಲ್ಲಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆ ನಂತರ ದುಬೈನಲ್ಲೇ ಶಾಸಕ ತನ್ವೀರ್ ಸೇಠ್ ವಿಶ್ರಾಂತಿ ಪಡೆಯುತ್ತಿದ್ದರು. ಇದೀಗ ವಿಶ್ರಾಂತಿ ಮುಗಿಸಿ ತನ್ವೀರ್ ಸೇಠ್ ವಿದೇಶದಿಂದ ಮೈಸೂರಿಗೆ ಮರಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: