ಮೈಸೂರು

ನಿಮ್ಮ ಉಸಿರಿರುವವರೆಗೂ ಕಾಪಾಡಿಕೊಳ್ಳಬಹುದಾದ ಅಮೂಲ್ಯವಾದ ಆಸ್ತಿ ವಿದ್ಯೆ : ಲೋಕಸಭಾ ಸದಸ್ಯ  ಪ್ರತಾಪ ಸಿಂಹ

ಶಾರದಾ ವಿಲಾಸ ವಿದ್ಯಾಸಂಸ್ಥೆಯಲ್ಲಿ ರೊಬೊಟಿಕ್ಸ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜನ್ಸ್ ಕೋರ್ಸ್ ಉದ್ಘಾಟನೆ

ಮೈಸೂರು, ಜ.10:- ನಗರದ ಶಾರದಾ ವಿಲಾಸ ವಿದ್ಯಾಸಂಸ್ಥೆಯ ಶತಮಾನೋತ್ಸವ ಭವನದಲ್ಲಿಂದು  ರೊಬೊಟಿಕ್ಸ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜನ್ಸ್ ಕೋರ್ಸಿನ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು-ಕೊಡಗು ಜಿಲ್ಲಾ ಲೋಕಸಭಾ ಸದಸ್ಯ  ಪ್ರತಾಪ ಸಿಂಹರವರು ಕೋರ್ಸ್‍ಗಳನ್ನು ಉದ್ಘಾಟಿಸಿದರು. ಬಳಿಕ  ಮಾತನಾಡಿ, ವಿದ್ಯೆಯನ್ನು ತಪಸ್ಸೆಂದು ತಿಳಿಯಿರಿ. ವಿದ್ಯೆಗೆ ಪರ್ಯಾಯ ಆಸ್ತಿ ಮತ್ತೊಂದಿಲ್ಲ. ವಿದ್ಯೆಯೇ ನಿಜವಾದ ಆಸ್ತಿ. ಹಣ, ಆಸ್ತಿ, ಒಡವೆಗಳನ್ನು ಕಸಿದುಕೊಳ್ಳಬಹುದು, ಕೊಂಡುಕೊಳ್ಳಲೂಬಹುದು. ಆದರೆ, ಯಾರೂ ಕೂಡ ವಿದ್ಯೆಯನ್ನು ಕಸಿದುಕೊಳ್ಳಲು ಎಂದೆಂದಿಗೂ ಸಾಧ್ಯವಿಲ್ಲ. ನಿಮ್ಮ ಉಸಿರಿರುವವರೆಗೂ ಕಾಪಾಡಿಕೊಳ್ಳಬಹುದಾದ ಅಮೂಲ್ಯವಾದ ಆಸ್ತಿ ವಿದ್ಯೆ. ಆದ್ದರಿಂದ ವಿದ್ಯೆಯನ್ನು ತಪಸ್ಸೆಂದು ಪರಿಗಣಿಸಿ ಹೆಚ್ಚು ಹೆಚ್ಚು ಜ್ಞಾನವನ್ನು ಸಂಪಾದಿಸಬೇಕೆಂದು ಕರೆ ನೀಡಿದರು. ಹೆಣ್ಣು ಮಕ್ಕಳು ವಿದ್ಯೆ ಕಲಿಯುವಲ್ಲಿ ಮುಂದಾಗಬೇಕು. ವಿದ್ಯೆ ಕಲಿತ ನಂತರ ಸಾಂಸಾರಿಕ ಜೀವನದತ್ತ ದಾಪುಗಾಲಿಡಬೇಕೇ ಹೊರತು, ಶಿಕ್ಷಣವನ್ನು ಮೊಟಕುಗೊಳಿಸಬಾರದೆಂದು ಕಿವಿಮಾತು ಹೇಳಿದರು.

ಮೈಸೂರಿಗೆ ಈಗಾಗಲೇ ಕೇಂದ್ರ ಸರ್ಕಾರದಿಂದ ಹೊಸ ಹೊಸ ಕೈಗಾರಿಕೋದ್ಯಮಿಗಳನ್ನು ಸ್ಥಾಪಿಸಲು ಅನುವು ಮಾಡುತ್ತಿದ್ದೇವೆ. ಹಾಗೆಯೇ, ಎಂಟು ವಿಮಾನಗಳನ್ನು ಪ್ರತಿ ದಿನವೂ ಸಂಚರಿಸುವಂತೆ ಮಾಡಬೇಕಾಗಿದೆ. ಇದರಿಂದ ಮೈಸೂರಿನ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಹೆಚ್ಚು ಉನ್ನತೀಕರಣ ಹೊಂದುತ್ತದೆ. ಇದರಿಂದ ಉದ್ಯೋಗ ಪ್ರಾಪ್ತಿಯಾಗುತ್ತದೆ.  ರೈಲು, ಬಸ್ಸುಗಳನ್ನು ಸಂಚರಿಸುವುದಕ್ಕಿಂತ ವಿಮಾನದಲ್ಲಿ ಓಡಾಡಿ ಸಮಯವನ್ನು ಕೂಡ ಉಳಿಸಬಹುದೆಂದು ತಿಳಿಸಿ, ಪ್ರಗತಿಯತ್ತ ದಾಪುಗಾಲು ಹಾಕಬೇಕೆಂದು ವಿವರಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ.ಕೆ.ಎಂ.ಮಹದೇವನ್‍  ಮಾತನಾಡಿ, ವಿಜ್ಞಾನಿಯಾದ ನಾನು ದೇವರನ್ನು ನಂಬುತ್ತೇನೆ. ವಿಜ್ಞಾನದ ಪ್ರಯೋಗ ಶಾಲೆಯ ಅಣು ಕಣಗಳಲ್ಲೂ ನಿಜವಾದ ದೇವರನ್ನು ಕಾಣಬಹುದು. ಅದೇ ಕಾಯಕವೇ ಕೈಲಾಸ. ವಿದ್ಯೆಯಿಂದ ಬುದ್ಧಿ ಕಲಿತು ಜೀವನ ನಿರ್ವಹಿಸುವುದನ್ನು ಕಲಿತಾಗ ಲಕ್ಷ್ಮೀ ತಾನಾಗಿಯೇ ಒಲಿಯುತ್ತದೆ. ತಂದೆ, ತಾಯಿಯರನ್ನು ಇಂದಿನ ಮಕ್ಕಳು ಗೌರವಿಸಬೇಕೆಂದು ತಿಳಿಸಿದರು.

ಸಮಾರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿಯವರು ಸಂಸ್ಥೆಯ ಹೊಸ ಹೊಸ ಕೋರ್ಸ್‍ಗಳನ್ನು ಪರಿಚಯಿಸಿ, ಬಂದ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು.

ವೇದಿಕೆಯಲ್ಲಿ ರೊಬೊಟಿಕ್ಸ್‍ನ ಮಾಂತ್ರಿಕ ಹರ್ಷ ಕಿಕ್ಕೇರಿ, ಸಂಸ್ಥೆಯ ಗೌರವ ಕಾರ್ಯದರ್ಶಿ ಹೆಚ್.ಕೆ.ಶ್ರೀನಾಥ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ವೈ.ಕೆ.ಭಾಸ್ಕರ್, ಸಿ.ಆರ್.ಕೃಷ್ಣ, ಎಸ್.ನಾಗರಾಜ್, ಪ್ರೊ.ಪಿ.ವಿ.ನರಹರಿ, ಎಂ.ವಿ.ಡೋಂಗ್ರೆ, ಎಸ್.ಎಲ್.ರಾಮಚಂದ್ರ, ಆರ್.ಎಸ್.ಮೋಹನ ಮೂರ್ತಿ ಹಾಗೂ ನಗರಪಾಲಿಕೆ ಸದಸ್ಯರಾದ ಮ.ವಿ.ರಾಮಪ್ರಸಾದ್, ಕೇಬಲ್ ಮಹೇಶ್ ಉಪಸ್ಥಿತರಿದ್ದರು.

ಸಮಾರಂಭಕ್ಕೆ ವಿಷ್ಣುತೀರ್ಥ ಪ್ರಾರ್ಥಿಸಿದರೆ, ಗೌರವ ಕಾರ್ಯದರ್ಶಿ ಹೆಚ್.ಕೆ.ಶ್ರೀನಾಥ್ ವಂದಿಸಿದರು. ಪ್ರೊ.ಎಂ.ದೇವಿಕಾ ಹಾಗೂ ಶಿಕ್ಷಕ ವೆಂಕಟರಮಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ರೊಬೊಟಿಕ್ಸ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜನ್ಸ್ ಕೋರ್ಸಿನ ಕಾರ್ಯಾಗಾರವನ್ನು ರೊಬೊಟಿಕ್ಸ್ ಮಾಂತ್ರಿಕ ಹರ್ಷ ಕಿಕ್ಕೇರಿಯವರು ನೆರವೇರಿಸಿಕೊಟ್ಟರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: