ಪ್ರಮುಖ ಸುದ್ದಿ

ಜ.17 ರಂದು ಮಡಿಕೇರಿಯಲ್ಲಿ ಬಿಜೆಪಿ ಜನಜಾಗೃತಿ ಅಭಿಯಾನದ ಸಮಾವೇಶ

ರಾಜ್ಯ( ಮಡಿಕೇರಿ) ಜ.11 : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ಬಿಜೆಪಿ ವತಿಯಿಂದ ಬೃಹತ್ ‘ಜನಜಾಗೃತಿ ಅಭಿಯಾನದ ಸಮಾವೇಶ’ವನ್ನು ಜ.17 ರಂದು ಮಡಿಕೇರಿಯಲ್ಲಿ ನಡೆಸಲಾಗುವುದೆಂದು ತಿಳಿಸಿರುವ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಕಾಯ್ದೆ ಕುರಿತು ಕಾಂಗ್ರೆಸ್ ಪಕ್ಷ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೆ ಬಿಜೆಪಿ ವತಿಯಿಂದ ಮನೆ ಮನೆಗೆ ತೆರಳಿ ಪೌರತ್ವ ಕಾಯ್ದೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಮುಸಲ್ಮಾನರ ಮನೆಗಳಿಗೆ ಕೂಡ ತೆರಳಿ ಕಾಯ್ದೆಯನ್ನು ಅರ್ಥೈಸಲಾಗುತ್ತಿದೆ. ಅಭಿಯಾನದ ಒಂದು ಭಾಗವಾಗಿ ಜ.17 ರಂದು ನಗರದ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು,ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದ ಪ್ರತಾಪಸಿಂಹ, ಶಾಸಕ ಕೆ.ಜಿ.ಬೋಪಯ್ಯ, ಎಂಎಲ್‍ಸಿ ಸುನಿಲ್ ಸುಬ್ರಮಣಿ, ಪಕ್ಷದ ಅಲ್ಪಸಂಖ್ಯಾತ ಘಟಕದ ಪ್ರಮುಖ ರಹೀಂ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಲೋಕಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ ನೇತೃತ್ವದ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯ ಮಸೂದೆಯನ್ನು ಮಂಡಿಸಿದಾಗ ಅದಕ್ಕೆ ಅಂಗೀಕಾರ ದೊರೆಯಿತು. ಆದರೆ ರಾಜ್ಯ ಸಭೆಯಲ್ಲಿ ವಿಪಕ್ಷಗಳ ಸಂಖ್ಯೆ ಹೆಚ್ಚಿದ್ದರು ಕಾಯ್ದೆಯನ್ನು ಒಪ್ಪಿಕೊಳ್ಳಲಾಗಿತ್ತು. ಇದರಿಂದ ಪೌರತ್ವ ಕಾಯ್ದೆ ಅನುಷ್ಟಾನಕ್ಕೆ ಬಂದಿದ್ದು, ಇದೀಗ ವಿನಾಕಾರಣ ಕ್ಷುಲ್ಲಕ ರಾಜಕೀಯಕ್ಕಾಗಿ ಕಾಂಗ್ರೆಸ್ ಸೇರಿದಂತೆ ಇತರೆ ಕೆಲವು ಪಕ್ಷಗಳು ಗೊಂದಲ ಸೃಷ್ಟಿಸುತ್ತಿರುವುದಾಗಿ ಆರೋಪಿಸಿದರು.
ದೇಶದಲ್ಲಿ ಸುಮಾರು 23 ಕೋಟಿ ಮಂದಿ ಮುಸಲ್ಮಾನರಿದ್ದು, ಇವರನ್ನು ದೇಶದಿಂದ ಕಳುಹಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪೌರತ್ವ ಕಾಯ್ದೆಯ ಬಗ್ಗೆ ವಿನಾಕಾರಣ ಮುಸಲ್ಮಾನರು ಆತಂಕಪಡುವ ಅಗತ್ಯವಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಲ್ಲಿ ಭಯ ಮೂಡಿಸುವ ಯತ್ನ ಮಾಡುತ್ತಿದೆಯೆಂದು ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದರು.
ಸಮಾವೇಶದಲ್ಲಿ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಜನ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ದೇಶದಲ್ಲಿ ಬಹುಮತ ಹೊಂದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಸಹಿಸದ ಕೆಲಸವಿಲ್ಲದ ಕಾಂಗ್ರೆಸ್ ಸಿಎಎ ವಿರುದ್ಧ ಗೊಂದಲ ಮೂಡಿಸುವ ಕೆಲಸವನ್ನು ಸೃಷ್ಟಿಸಿಕೊಳ್ಳುತ್ತಿದೆಯೆಂದು ವ್ಯಂಗ್ಯವಾಡಿದರು.
ಜಿಲ್ಲೆಯಲ್ಲಿ ಪೌರತ್ವ ಕಾಯ್ದೆಯ ಮನೆ ಮನೆ ಜಾಗೃತಿ ಅಭಿಯಾನ ಮುಂದುವರೆದಿದ್ದು, ಮುಸಲ್ಮಾನರ ಮನೆಗಳಲ್ಲಿ ಕಾಯ್ದೆಯನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ. ತಪ್ಪು ದಾರಿಗೆ ಎಳೆಯುತ್ತಿರುವ ಪಕ್ಷಗಳನ್ನು ಮುಸಲ್ಮಾನರು ಟೀಕಿಸಲು ಆರಂಭಿಸಿದ್ದಾರೆ ಎಂದು ಭಾರತೀಶ್ ಹೇಳಿದರು.
ಕೇಂದ್ರ ಸರ್ಕಾರ ಪ್ರತಿಯೊಂದು ಜಾತಿ ಧರ್ಮದ ಪರವಾಗಿದ್ದು, ಹಲವು ಯೋಜನೆಗಳನ್ನು ಯಾವುದೇ ಜಾತಿ ಮತ ಭೇದವಿಲ್ಲದೆ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಮಾಡಿದೆ. ವಿನಾಕಾರಣ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಅಪಪ್ರಚಾರ ಮಾಡುವುದನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದ ಅವರು, ಬಿಜೆಪಿಯ ಜನಜಾಗೃತಿ ಸಮಾವೇಶದಲ್ಲಿ ಎಲ್ಲಾ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿ ಕುಶಾಲಪ್ಪ, ಮಡಿಕೇರಿ ನಗರಾಧ್ಯಕ್ಷ ಮನು ಮಂಜುನಾಥ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಕಾಂಗೀರ ಸತೀಶ್ ಹಾಗೂ ಸೋಮವಾರಪೇಟೆ ಮಂಡಲ ಅಧ್ಯಕ್ಷ ಮನು ರೈ ಉಪಸ್ಥಿತರಿದ್ದರು.(ಕೆಸಿಐ,ಎಸ್.ಎಚ್)

Leave a Reply

comments

Related Articles

error: