ಪ್ರಮುಖ ಸುದ್ದಿ

ಸಿಎಎ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಲಿ : ಕೆ.ಎ.ಹ್ಯಾರಿಸ್ ಒತ್ತಾಯ

ರಾಜ್ಯ( ಮಡಿಕೇರಿ) ಜ.11 : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ಕುರಿತು ಜನ ಜಾಗೃತಿ ಅಭಿಯಾನ ನಡೆಸುತ್ತಿರುವ ಬಿಜೆಪಿ ಕ್ರಮವನ್ನು ಖಂಡಿಸಿರುವ ನಾಪೋಕ್ಲು ಆರ್‍ಟಿಐ ಕಾರ್ಯಕರ್ತ ಕೆ.ಎ.ಹ್ಯಾರಿಸ್, ಸರ್ಕಾರದ ಕಾರ್ಯಕ್ರಮವನ್ನು ಜವಾಬ್ದಾರಿಯುತ ಅಧಿಕಾರಿಗಳು ಅನುಷ್ಟಾನಗೊಳಿಸಬೇಕೇ ಹೊರತು, ಒಂದು ರಾಜಕೀಯ ಪಕ್ಷವಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಎ ಕಾಯ್ದೆ ಬಗ್ಗೆ ದೇಶವ್ಯಾಪಿ ಗೊಂದಲ ಮತ್ತು ಆತಂಕದ ವಾತಾವರಣ ಮೂಡಿದ್ದು, ಇದನ್ನು ದೂರ ಮಾಡಲು ಅಧಿಕಾರಿಗಳು ಸಾರ್ವಜನಿಕರಿಗೆ ಸಮಗ್ರ ಮಾಹಿತಿಯನ್ನು ನೀಡಬೇಕೆಂದು ಒತ್ತಾಯಿಸಿದರು.
ಲೋಕಸಭೆಯಲ್ಲಿ ಬಹುಮತದಿಂದ ಪೌರತ್ವ ಕಾಯ್ದೆ ಅನುಮೋದನೆಗೊಂಡು ರಾಜ್ಯ ಸಭೆಯಲ್ಲಿ ವಿಪಕ್ಷ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿದ್ದರು ಕಾಯ್ದೆಗೆ ಒಪ್ಪಿಗೆ ಸೂಚಿಸಲಾಗಿತ್ತು. ಆದರೆ, ಇದೀಗ ಇವೇ ವಿಪಕ್ಷಗಳು ಕಾಯ್ದೆ ವಿರುದ್ಧ ಮುಷ್ಕರಗಳನ್ನು ನಡೆಸುತ್ತಿದ್ದು, ರಾಜಕೀಯ ಪಕ್ಷಗಳನ್ನು ಜನರು ನಂಬುವುದಾದರು ಹೇಗೆ ಎಂದು ಹ್ಯಾರಿಸ್ ಪ್ರಶ್ನಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ ಏಕಾಏಕಿ, ರಾತೋರಾತ್ರಿ ಸರ್ವಾಧಿಕಾರದ ಮೂಲಕ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬುಗೆ ಇಟ್ಟಿರುವ ಜನಸಮೂಹದಲ್ಲಿ ಆತಂಕವನ್ನು ಮೂಡಿಸಿದೆ. ಮಾತೆತ್ತಿದ್ದರೆ ನಮಗೆ ಬಹುಮತವಿದೆಯೆಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತ್ತಿದೆ. ಆದರೆ, ಶೇ.60ಕ್ಕೂ ಹೆಚ್ಚಿನ ಮತಗಳು ಬಿಜೆಪಿಗೆ ವಿರುದ್ಧವಾಗಿಯೇ ಚಲಾವಣೆಯಾಗಿದೆ ಎಂದು ಹೇಳಿದರು.
ಹೋರಾಟಗಳನ್ನು ಹತ್ತಿಕ್ಕುವುದಕ್ಕಾಗಿ ಪೊಲೀಸ್ ಬಲಪ್ರಯೋಗ ಮಾಡಿ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿದ ಹ್ಯಾರಿಸ್, ಕಾಯ್ದೆ ಕುರಿತು ಸರ್ಕಾರ ಮತ್ತು ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.
ಅಕ್ಕಪಕ್ಕದ ರಾಷ್ಟ್ರಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ನೊಂದಿರುವ ಭಾರತೀಯ ಮೂಲದವರಿಗೆ ಪೌರತ್ವ ನೀಡುವುದಕ್ಕಾಗಿ ಕಾಯ್ದೆಯನ್ನು ಜಾರಿಗೆ ತಂದಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ದೇಶದಲ್ಲೆ ಅನೇಕರು ಇಂದಿಗೂ ಸಂಕಷ್ಟದ ಪರಿಸ್ಥಿತಿಯಲ್ಲಿ ನೋವಿನ ದಿನಗಳನ್ನು ದೂಡುತ್ತಿದ್ದಾರೆ, ಪ್ರಾಕೃತಿಕ ವಿಕೋಪದಲ್ಲಿ ಕಷ್ಟ ನಷ್ಟಗಳನ್ನು ಅನುಭವಿಸಿ ನೊಂದಿರುವ ಸಂತ್ರಸ್ತರಿಗೆ ಇಲ್ಲಿಯವರೆಗೆ ಪರಿಹಾರ ದೊರಕಿಲ್ಲ. ಈ ರೀತಿಯಾಗಿ ನೊಂದಿರುವ ದೇಶದ ಜನರಿಗೆ ಮೊದಲು ಕೇಂದ್ರ ಸರ್ಕಾರ ನ್ಯಾಯ ಒದಗಿಸಲಿ ಎಂದು ಹ್ಯಾರಿಸ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಕೆ.ಎಂ.ಝಕಾರಿಯಾ, ಎಂ.ಎ. ಶಬ್ಬೀರ್, ಕೆ.ಎ. ಶಹೀದ್, ಹಾಗೂ ಕೆ.ಎ.ಅಬ್ದುಲ್ಲ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: