ದೇಶಪ್ರಮುಖ ಸುದ್ದಿವಿದೇಶ

ಸ್ಯಾಮ್ಸಂಗ್ ಟಿವಿ, ಕಾರು, ಟ್ರಕ್ ಮೂಲಕವೂ ಅಮೆರಿಕ ಗೂಢಚಾರಿಕೆ ; ವಿಕಿಲೀಕ್ಸ್ ವರದಿ

ವಾಷಿಂಗ್ಟನ್ : ಅಮೆರಿಕದ ತನಿಖಾ ಸಂಸ್ಥೆ ಸಿಐಎ ಸ್ಯಾಮ್ಸಂಗ್ ಸ್ಮಾರ್ಟ್ ಟಿವಿಗಳ ಮೂಲಕವೂ ಗೂಢಚಾರಿಕೆ ನಡೆಸುತ್ತಿದೆ ಎಂಬ ಸ್ಫೋಟಕ ವರದಿಯನ್ನು ಖ್ಯಾತ ತನಿಖಾ ವರದಿ ಜಾಲತಾಣ ವಿಕಿಲೀಕ್ಸ್ ಬಹಿರಂಗಪಡಿಸಿದೆ.

ಸ್ಯಾಮ್ ಸಂಗ್ ಸ್ಮಾರ್ಟ್ ಟಿವಿಗಳನ್ನೇ ಮೈಕ್ರೋಫೋನ್ ರೀತಿ ಬಳಿಸಿಕೊಳ್ಳುತ್ತಿದ್ದು, ಟಿವಿಯನ್ನು ಸ್ವಿಚ್ ಆಫ್ ಮಾಡಿದ್ದರೂ ಅದರಲ್ಲಿರುವ ಉಪಕರಣಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ಅವುಗಳ ಮೂಲಕ ಸಿಐಎ ನಮ್ಮ ಮಾತುಗಳನ್ನು ಕದ್ದಾಲಿಕೆ ಮಾಡುತ್ತಿರುತ್ತದೆ!

ಕೇವಲ ಇದು ಮಾತ್ರವಲ್ಲದೇ ಖ್ಯಾತ ಮೆಸೆಜಿಂಗ್ ಆ್ಯಪ್ ವಾಟ್ಸಪ್ ನಲ್ಲಿರುವ ಸುರಕ್ಷತಾ ಚಾಟಿಂಗ್ ವಿಧಾನ ಎನ್‍ಕ್ರಿಪ್ಶನ್‍ನಂತಹ ಆ್ಯಪ್‍ಗಳನ್ನೇ ಹ್ಯಾಕ್ ಮಾಡಿ ಅವುಗಳಲ್ಲಿನ ಮಾಹಿತಿ ತಿಳಿದುಕೊಳ್ಳುತ್ತದೆ. ಅಷ್ಟೇ ಏಕೆ? ನಿಮ್ಮ ಕಾರುಗಳನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು ಎಂದು ವಿಕಿಲೀಕ್ಸ್ ತನ್ನ  ವರದಿಯಲ್ಲಿ ಎಚ್ಚರಿಕೆ ನೀಡಿದೆ.

ವಿಕಿಲೀಕ್ಸ್ ಬಹಿರಂಗಪಡಿಸಿರುವ ದಾಖಲೆಗಳು ಸಿಐಎಯಿಂದ ಸೋರಿಕೆಯಾದ ದಾಖಲೆಗಳೇ ಅಥವಾ ಇಲ್ಲವೇ ಎಂಬ ವಿಚಾರದ ಕುರಿತು ಸ್ಪಷ್ಟನೆ ನೀಡಲು ಸಿಐಎ ಮತ್ತು ಶ್ವೇತಭವನದ ಅಧಿಕಾರಿಗಳು ನಿರಾಕರಿಸಿದ್ದಾರೆ.

ವೈರಸ್‍ಗಳ ಸೃಷ್ಟಿ !

ವಿಕಿಲೀಕ್ಸ್ ವರದಿಯಲ್ಲಿ ಸಿಐಎ ತನ್ನ ಗೂಢಚಾರಿಕೆಗಾಗಿ ಸಾವಿರಕ್ಕೂ ಅಧಿಕ ವೈರಸ್, ಟ್ರಾಜನ್, ಮಾಲ್‍ವೇರ್‍ ಸೃಷ್ಟಿಮಾಡಿ ವಿವಿಧೆಡೆ ಪಸರಿರುವ ವಿಚಾರ ಬೆಳಕಿಗೆ ಬಂದಿದೆ. ಈ ವೈರಸ್‍ಗಳನ್ನು ಸ್ಯಾಮ್ಸಂಗ್ ನಂತಹ ಖಾಸಗಿ ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಕಳುಹಿಸಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾಗಿದೆ ಎಂದು ವಿಕಿಲೀಕ್ಸ್ ವರದಿಯಲ್ಲಿ ಹೇಳಿದೆ.

ಐಫೋನ್‌, ಆ್ಯಂಡ್ರಾಯ್ಡ್ ಮೊಬೈಲ್, ಮೈಕ್ರೊಸಾಫ್ಟ್ ಸಾಫ್ಟ್‌ವೇರ್, ಸ್ಯಾಮ್ಸಂಗ್ ಸ್ಮಾರ್ಟ್ ಟಿವಿಗಳಲ್ಲಿ ಇವುಗಳನ್ನು ಗುಪ್ತವಾಗಿ ಅಳವಡಿಸಿ, ಮೈಕ್ರೊಫೋನ್‌ಗಳನ್ನಾಗಿ ಸಿಐಎ ಪರಿವರ್ತಿಸುತ್ತಿದೆ. ಈ ಮೂಲಕ ಕಾರುಗಳು ಮತ್ತು ಟ್ರಕ್‌ ಗಳಲ್ಲಿರುವ ವಿದ್ಯುನ್ಮಾನ ನಿಯಂತ್ರಣ ವ್ಯವಸ್ಥೆಗಳ ಮೇಲೂ ಸಿಐಎ ನಿಯಂತ್ರಣ ಸಾಧಿಸಲು ಸಾಧ್ಯವಿದೆ ಎಂದು ವಿಕಿಲೀಕ್ಸ್ ತಿಳಿಸಿದೆ.

(ಎನ್.ಬಿ.ಎನ್)

Leave a Reply

comments

Related Articles

error: