ಮೈಸೂರು

ರಾಜ್ಯ ಸರ್ಕಾರ ಬರ ಪರಿಹಾರ ಕಾರ್ಯ ಕೈಗೊಳ್ಳುವುದು ಬಿಟ್ಟು ವೃಥಾ ಕೇಂದ್ರ ಸರ್ಕಾರದ ದೂಷಣೆ ಮಾಡುತ್ತಿದೆ: ಬಿಜೆಪಿ ಆರೋಪ

ರಾಜ್ಯದ 160 ತಾಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದ್ದು, ರಾಜ್ಯ ಸರ್ಕಾರ ಈ ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆಯಾದರೂ, ಬರಗಾಲದ ಭೀಕರತೆ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಬರ ಪರಿಹಾರ ಕೈಗೊಳ್ಳಬೇಕಿದ್ದು ಮುಖ್ಯಮಂತ್ರಿ ಹಾಗೂ ಆಡಳಿತ ಪಕ್ಷದ ಅಧ್ಯಕ್ಷರು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಮೈಸೂರು ನಗರ ಭಾರತೀಯ ಜನತಾ ಪಕ್ಷ ಪ್ರತಿಭಟನೆ ನಡೆಸಿತು.

ಮೈಸೂರು ಜಿಲ್ಲಾ ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ಬೇಜವಾಬ್ದಾರಿತನಕ್ಕೆ ಛೀಮಾರಿ ಹಾಕಿದರು. ಬರ ನಿರ್ವಹಣೆಗೆ ಮುಖ್ಯಮಂತ್ರಿಗಳು ಈಗಾಗಲೇ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಸಭೆ ಕರೆದು ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಾಗಿತ್ತು. ಗೃಹ, ಕಂದಾಯ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಸಹಕಾರ ಸಚಿವರು ರಾಜ್ಯ ಪ್ರವಾಸ ಕೈಗೊಂಡು ರೈತರ ನೆರವಿಗೆ ಧಾವಿಸಬೇಕಿತ್ತು. ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಬೇಕಿತ್ತು. ಅದನ್ನು ಮಾಡದೇ ಕೇಂದ್ರ ಸರ್ಕಾರದ ದೂಷಣೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬರಪೀಡಿತ ತಾಲೂಕುಗಳಲ್ಲಿನ ಜನರು ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಜಾನುವಾರುಗಳಿಗೆ ಮೇವು ಸಿಗದೇ, ರೈತಾಪಿವರ್ಗದವರು ಜಾನುವಾರುಗಳನ್ನು ಕಟುಕರಿಗೆ ಮಾರುವಂಥಹ ಪರಿಸ್ಥಿತಿ ನಿರ್ಮಾಣವಾಗಿದೆ. ಬರಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಆರಂಭಿಸಬೇಕಾಗಿದ್ದ ರಾಜ್ಯ ಸರ್ಕಾರ ತನ್ನ ಕರ್ತವ್ಯದಲ್ಲಿ ಸಂಪೂರ್ಣ ವಿಫಲವಾಗಿದೆ. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರ ಬರಪರಿಹಾರಕ್ಕಾಗಿ ಮಂಜೂರು ಮಾಡಿದ 1,782 ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳುವಲ್ಲಿಯೂ ನಿರುತ್ಸಾಹ ತೋರಿದೆ. ಮೊದಲ ಕಂತಾಗಿ 450ಕೋ.ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿ ಒಂದು ತಿಂಗಳಾದರೂ ಅದರಲ್ಲಿ 200ಕೋಟಿ ರೂ.ಗಳನ್ನು ಮಾತ್ರವೇ ರೈತರಿಗೆ ವಿತರಿಸುವುದಾಗಿ ಕಂದಾಯ ಸಚಿವರು ಇದೀಗ ಹೇಳಿಕೆ ನೀಡಿದ್ದಾರೆ. ಇದು ನಾಡಿನ ರೈತರ ಸಮುದಾಯಕ್ಕೆ ಬಗೆದ ದ್ರೋಹವಾಗಿದೆ ಎಂದರು.

ಬರಗಾಲ ಪರಿಸ್ಥಿತಿಯನ್ನು ಶಮನಗೊಳಿಸಬೇಕಾದ ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ. ರೈತರ ಕಣ್ಣೀರು ಒರೆಸುವ ಪ್ರಯತ್ನವಾಗುತ್ತಿಲ್ಲ. ರಾಜ್ಯದಲ್ಲಿ ಸರ್ಕಾರವಿದ್ದೂ ಸತ್ತಂತಾಗಿದೆ ಎಂದು ಆರೋಪಿಸಿದರು. ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಬೇಕು.ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲು ಸಮರೋಪಾದಿಯಲ್ಲಿ ಯೋಜನೆ ರೂಪಿಸಬೇಕು. ರೈತರ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬಲು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಮೊಕ್ಕಾಂ ಹೂಡಿ ಬರಪರಿಹಾರ ಕಾರ್ಯಕ್ಕೆ ಚಾಲನೆ ನೀಡಬೇಕು. ಜಾನುವಾರುಗಳಿಗೆ ಮೇವು ಒದಗಿಸಲು ತಕ್ಷಣ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡುವುದರ ಜೊತೆಗೆ ಹಣ ಬಿಡುಗಡೆ ಮಾಡಬೇಕು. ಗೋಶಾಲೆಯನ್ನು ರಾಜ್ಯಾದ್ಯಂತ ತೆರೆದು ಸಂಕಷ್ಟದಲ್ಲಿರುವ ರೈತರಿಗೆ ಜಾನುವಾರುಗಳಿಗೆ ಆಶ್ರಯ ಒದಗಿಸಬೇಕು. ಗುಳೆ ಹೋಗುವ ಅನಿವಾರ್ಯತೆ ಎದುರಿಸುತ್ತಿರುವ ರೈತಾಪಿ ಕುಟುಂಬ ಮತ್ತು ಕೂಲಿ ಕಾರ್ಮಿಕರಿಗೆ ಉದ್ಯೋಗ ಭರವಸೆ ಯೋಜನೆಯಡಿ ಸೂಕ್ತ ಉದ್ಯೊಗ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿ.ಪಿ.ಮಂಜುನಾಥ್, ನಗರಾಧ್ಯಕ್ಷ ಡಾ.ಮಂಜುನಾಥ್, ಕಾ.ಪು.ಸಿದ್ದಲಿಂಗಸ್ವಾಮಿ, ಹೆಚ್.ವಿ.ರಾಜೀವ್ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. (ಕೆ.ಎಸ್.ಎಸ್.ಎಚ್) ಚಿತ್ರ: ಹಂಪಾನಾ

Leave a Reply

comments

Related Articles

error: