ಕ್ರೀಡೆ

ಲಂಕಾ ವಿರುದ್ಧ ಟಿ20 ಸರಣಿ ಜಯಿಸಿದ ಕೊಹ್ಲಿ ಪಡೆ

ಪುಣೆ,ಜ.11-ಪ್ರವಾಸಿ ಶ್ರೀಲಂಕಾ ವಿರುದ್ಧ ನಿನ್ನೆ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 78 ರನ್‌ಗಳಿಂದ ಜಯ ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಿಂದ ಜಯಿಸಿತು.

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 201 ರನ್‌ ಪೇರಿಸಿತು. ಬಳಿಕ ಗುರಿ ಬೆನ್ನತ್ತಿದ ಲಂಕಾ ತಂಡ 15.5 ಓವರ್‌ಗಳಲ್ಲಿ 123 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಶಿಖರ್ ಧವನ್, ಕೆ.ಎಲ್.ರಾಹುಲ್ ಉತ್ತಮ ಆರಂಭವೊದಗಿಸಿಕೊಟ್ಟರು. ಇವರಿಬ್ಬರು ಮೊದಲ ವಿಕೆಟ್ ಗೆ 97 ರನ್‌ಗಳ ಭರ್ಜರಿ ಜೊತೆಯಾಟ ನೀಡಿದರು. ಧವನ್‌ ನಿರ್ಗಮನದ ಬಳಿಕ ಭಾರತ ತಂಡ ನಂತರದ 30 ರನ್‌ಗಳನ್ನು ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ವೇಳೆ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾದರು.

ಶಿಖರ್ ಧವನ್ (52), ಕೆ.ಎಲ್.ರಾಹುಲ್ (54), ವಿರಾಟ್ ಕೊಹ್ಲಿ (26) ರನ್ ಗಳಿಸಿದರೆ, ಇನಿಂಗ್ಸ್‌ ಅಂತ್ಯದಲ್ಲಿ ಆರ್ಭಟಿಸಿದ ಮನೀಶ್‌ ಪಾಂಡೆ ಅಜೇಯ 31 ಮತ್ತು ಶಾರ್ದುಲ್‌ ಠಾಕೂರ್‌ ಅಜೇಯ 22 ತಂಡದ ಮೊತ್ತವನ್ನು 200 ರನ್‌ಗಳ ಗಡಿ ದಾಟಿಸಿದರು. ಉಳಿದಂತೆ ಸಂಜು ಸ್ಯಾಮ್ಸನ್ (6), ಶ್ರೇಯಸ್ ಅಯ್ಯರ್ (4) ಬೇಗ ವಿಕೆಟ್ ಒಪ್ಪಿಸಿದರು. ಶ್ರೀಲಂಕಾ ಪರ ಲಕ್ಷನ್ ಸಂದಕನ್ 3, ವರಿಂದು ಡಿಸಿಲ್ವಾ, ಲಹೀರು ಕುಮಾರ ತಲಾ ಒಂದು ವಿಕೆಟ್ ಪಡೆದರು.

ಇನ್ನು ವಿರಾಟ್ ಕೊಹ್ಲಿ ಭಾರತ ತಂಡದ ನಾಯಕರಾಗಿ 11,000 ರನ್ ಗಳಿಸಿದ್ದಾರೆ. ಅತಿ ವೇಗವಾಗಿ (196 ಇನಿಂಗ್ಸ್) ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (252 ಇನಿಂಗ್ಸ್) ಮತ್ತು ದಕ್ಷಿಣ ಆಫ್ರಿಕಾದ ಗ್ರೆಮ್ ಸ್ಮಿತ್ (264 ಇನಿಂಗ್ಸ್) ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರು ಅಂತಾರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್ ನಲ್ಲಿ ಹೆಚ್ಚು ವಿಕೆಟ್ (45 ಪಂದ್ಯ) ಗಳಿಸಿದ ಭಾರತದ ಬೌಲರ್ ಆದರು. ಬುಮ್ರಾ, ಯಜುವೇಂದ್ರ ಚಾಹಲ್ (52 ವಿಕೆಟ್, 37 ಪಂದ್ಯ), ಆರ್.ಅಶ್ವಿನ್ (52 ವಿಕೆಟ್, 46 ಪಂದ್ಯ) ಅವರನ್ನು ಮೀರಿದ ಸಾಧನೆ ಮಾಡಿದ್ದಾರೆ.

ಟೀಂ ಇಂಡಿಯಾ ನೀಡಿದ್ದ ಗುರಿಯನ್ನು ಬೆನ್ನತ್ತಿದ ಲಂಕಾ ಪಡೆಯನ್ನು ನವದೀಪ್‌ ಸೈನಿ ತಮ್ಮ ಮಿಂಚಿನ ದಾಳಿಯ ಬೇಟೆಯಾಡಿದರು. ಧನಂಜಯ ಡಿಸಿಲ್ವಾ (57), ಏಂಜೆಲೊ ಮ್ಯಾಥ್ಯೂಸ್ (31) ರನ್ ಗಳಿಸಿದರು. ಇವರನ್ನು ಬಿಟ್ಟರೆ ಉಳಿದವರ್ಯಾರು ಹೆಚ್ಚು ಹಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಭಾರತದ ನವದೀಪ್ ಸೈನಿ 3, ಶಾರ್ದೂಲ್‌ ಠಾಕೂರ್‌, ವಾಷಿಂಗ್ಟನ್‌ ಸುಂದರ್‌ ತಲಾ 2 ವಿಕೆಟ್‌ ಪಡೆದರೆ, ಜಸ್‌ಪ್ರೀತ್‌ ಬುಮ್ರಾ  1 ವಿಕೆಟ್ ಕಬಳಿಸಿದರು.

ಶಾರ್ದೂಲ್ ಠಾಕೂರ್ ಪಂದ್ಯಶ್ರೇಷ್ಠರಾಗಿ, ಮನೀಷ್ ಪಾಂಡೆ ಗೇಮ್ ಚೇಂಜರ್ ಆಗಿ, ನವದೀಪ್ ಸೈನಿ ಸರಣಿ ಶ್ರೇಷ್ಠರಾಗಿ ಹೊರಹೊಮ್ಮಿದರು.

.14ರಿಂದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ: ಭಾರತ, ಆಸ್ಟ್ರೇಲಿಯಾ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪೈಪೋಟಿ ನಡೆಸಲಿದ್ದು, ಮೊದಲ ಪಂದ್ಯ ಜ.14ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. (ಎಂ.ಎನ್)

Leave a Reply

comments

Related Articles

error: