ಮೈಸೂರು

ಜೀವನದಲ್ಲಿ ಏನಾದರೂ ಸಾಧಿಸಬೇಕೆಂದಿದ್ದರೆ  ಕಠಿಣ ಪರಿಶ್ರಮ ಹಾಗೂ ಒಳ್ಳೆಯ ಕನಸು ಇರಬೇಕು : ಎಚ್.ಎನ್.ಹೇಮಲತಾ

ಮೈಸೂರು, ಜ.11:- ಜೀವನದಲ್ಲಿ ಏನಾದರೂ ಸಾಧಿಸಬೇಕೆಂದಿದ್ದರೆ  ಕಠಿಣ ಪರಿಶ್ರಮ ಹಾಗೂ ಒಳ್ಳೆಯ ಕನಸು ಇರಬೇಕು   ಎಂದು ಭಾರತದ ಮಹಿಳಾ ವಾಲಿಬಾಲ್ ತಂಡದ ತರಬೇತುದಾರರಾದ ನೈರುತ್ಯ ರೈಲ್ವೆ ಅಧೀಕ್ಷಕಿ ಎಚ್.ಎನ್.ಹೇಮಲತಾ  ತಿಳಿಸಿದರು.

ಅವರು ನಿನ್ನೆ  ಸಂತ ಫಿಲೋಮಿನಾ ಕಾಲೇಜಿನಲ್ಲಿ  ಆಯೋಜಿಸಿದ್ದ ವಾರ್ಷಿಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿರುವುದು ಮಾತ್ರವಲ್ಲದೇ ಉತ್ತಮ ಪ್ರದರ್ಶನ ನೀಡುತ್ತಿರುವುದನ್ನು ಕಂಡು ನನ್ನ ಬಾಲ್ಯದ ದಿನಗಳು ನೆನಪಾಗುತ್ತಿವೆ ಎಂದರು.

ಪ್ರಾಂಶುಪಾಲೆ ಡಾ.ಟಿ.ರೂತ್ ಶಾಂತಕುಮಾರಿ ಮಾತನಾಡಿ  ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಕ್ರೀಡಾಪಟು ಪಡೆಯುವ ಚಿನ್ನದ ಪದಕವು ಕೆಲ ದಿನ  ಕಳೆದಂತೆ ಮಾಸು ಹೋಗುತ್ತದೆ. ಆದರೆ, ಸ್ಪರ್ಧೆಯಲ್ಲಿ ಪ್ರತಿಯೊಬ್ಬ ಕ್ರೀಡಾಪಟು ಮೈದಾನದಲ್ಲಿ ಉತ್ತಮ ಸ್ನೇಹ ಬಾಂಧವ್ಯ ಬೆಳೆಸಿಕೊಳ್ಳುವುದನ್ನ ಕಲಿಯಬೇಕು. ಜೀವನದಲ್ಲಿ ಎಲ್ಲದಕ್ಕಿಂತ ದೊಡ್ಡದು ಸ್ನೇಹ ಬಂಧ ಎಂದು ಹೇಳಿದರು.

ಇದೇ ವೇಳೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕರಾಟೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಜಸ್ನಾ ಜೋಸೆಫ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಕಾಲೇಜಿನ ರೆವರೆಂಡ್ ಫಾದರ್ ಬರ್ನಾಡ್ ಪ್ರಕಾಶ್ ಬಾರ್ನಿಸ್, ವೈಸ್‌ರೆಕ್ಟರ್ ಮರಿಯಾ ಝೇವಿಯರ್, ನಿರ್ದೇಶಕ ಆರ್ತ್‌ಬರ್ಟ್‌ ಪಿಂಟೊ  ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: