ಮೈಸೂರು

ಗಾಂಧೀಜಿಯ ವಿಚಾರಧಾರೆ ಅಜರಾಮರ : ಪ್ರೊ.ದಯಾನಂದಮಾನೆ ಅಭಿಮತ

ಗಾಂಧೀಜಿಯ ವಿಚಾರಧಾರೆಗಳು ಸೂರ್ಯಚಂದ್ರರಿರುವವರೆಗೆ ಪ್ರಸ್ತುತ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ದಯಾನಂದ ಮಾನೆ ಅಭಿಪ್ರಾಯಪಟ್ಟರು.

ಗುರುವಾರ ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಭವನದಲ್ಲಿ ಗಾಂಧಿ ಅಧ್ಯಯನ ಕೇಂದ್ರ, ಶಾರದಾವಿಲಾಸ ಶಿಕ್ಷಣ ಮಹಾವಿದ್ಯಾಲಯ, ಸೆಂಟ್‍ಜೋಸೆಫ್ ಪ್ರಥಮದರ್ಜೆ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಗಾಂಧಿಭವನ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಾಂಧೀಜಿ ಕೇವಲ ಭಾರತಕ್ಕೆ ಮಾತ್ರ ನಾಯಕನಲ್ಲ. ವಿಶ್ವ ಸಮುದಾಯದ ದೊಡ್ಡ ನಾಯಕ. ಕಿರೀಟವಿಲ್ಲದ ರಾಜ. ರಾಜಕೀಯ ಸನ್ಯಾಸಿ, ಅಪ್ರಶ್ನಾತೀತ ನಾಯಕ. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ, ಬರಾಕ್ ಒಬಾಮ ಸೇರಿದಂತೆ ವಿಶ್ವದ ಅಗ್ರಗಣ್ಯ ನಾಯಕರಿಗೆ ಸ್ಫೂರ್ತಿಯ ಚಿಲುಮೆಯಾಗಿ, ಪ್ರೇರಣಾ ಶಕ್ತಿಯಾಗಿದ್ದಾರೆ. ಅವರಲ್ಲಿ ಅಂತಹ ವಿಶಿಷ್ಟ ಚುಂಬಕ ಶಕ್ತಿಯಿದೆ ಎಂದು ಬಣ್ಣಿಸಿದರು.

ಗಾಂಧೀಜಿ ಹಾಗೂ ಅಂಬೇಡ್ಕರ್ ಅಸ್ಪಶ್ಯರು, ಹಿಂದುಳಿದವರು, ಮಹಿಳೆಯರು, ದಲಿತರು, ತಳಸಮುದಾಯದವರು, ಶೋಷಣೆಗೆ ಒಳಗಾದವರಿಗೆ ದಾರಿ ದೀಪವಾಗಿದ್ದರು. ಬ್ರಿಟೀಷರ ದಬ್ಬಾಳಿಕೆಯಿಂದ ನಲುಗಿ ಹೋಗಿದ್ದ ಭಾರತಕ್ಕೆ ಗಾಂಧೀಜಿ ತಮ್ಮ ಅಹಿಂಸಾ ಹೋರಾಟಗಳ ಮೂಲಕ ಆಶಾಕಿರಣವಾದರು. ದೇಶದ ರಾಜಕೀಯ ಕ್ಷೇತ್ರದಲ್ಲಿ ಏನೇ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದರೂ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಮರೆಯಲು ಸಾಧ್ಯವಿಲ್ಲ. ಸಾಮಾಜಿಕ, ಆರ್ಥಿಕ, ರಾಜಕೀಯ ಪುನರ್ ನಿರ್ಮಾಣಕ್ಕೆ ಗಾಂಧೀಜಿಯ ತತ್ವ ಸಿದ್ಧಾಂತಗಳನ್ನು ಬಳಸಿಕೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಅವರನ್ನು ಮರೆಯುತ್ತಿರುವ ಆತಂಕ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗಾಂಧೀಜಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಆರಂಭದಿಂದಲೂ ವಿರೋಧಿಸುತ್ತಲೇ ಬಂದಿದ್ದರು. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ದೆವ್ವದ ಸಂತತಿ ಎಂದು ಕರೆಯುತ್ತಿದ್ದ ಅವರು ಭಾರತೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಗುಡಿ ಕೈಗಾರಿಕೆ, ಸ್ವದೇಶಿ ವಸ್ತುಗಳ ಬಳಕೆ ಸೇರಿದಂತೆ ಪ್ರತಿಯೊಬ್ಬರಿಗೂ ಉದ್ಯೋಗ ದೊರೆಯಬೇಕು. ಮಾನಸಿಕವಾಗಿ, ರಾಜಕೀಯವಾಗಿ ಎಲ್ಲರಲ್ಲೂ ಭಾರತೀಕರಣವಾಗಬೇಕು ಎಂಬ ಆಶಯ ಹೊಂದಿದ್ದರು. ವೈರುಧ್ಯವನ್ನು ಮೀರಿ ಎಲ್ಲರೂ ಒಂದಾಗಬೇಕು ಎಂದು ಹೇಳುತ್ತಿದ್ದರು. ವಿಶ್ವಮಾನವ ಸಂದೇಶವನ್ನು ಅಳವಡಿಸಿಕೊಂಡಿದ್ದರು. ಆದರೆ, ಇಂದಿನ ಯುವಕರು ಗಾಂಧೀಜಿಯ ಮಾರ್ಗವನ್ನೇ ಮರೆಯುತ್ತಿದ್ದಾರೆ. ಸಂವಿಧಾನ, ರಾಜಕೀಯ ಪಠ್ಯವಿಷಯಗಳಂತೆ ಗಾಂಧೀಜಿಯ ವಿಚಾರಧಾರೆಗಳು ಪಠ್ಯವಾಗಬೇಕು. ಆಗ ಮಾತ್ರ ದೇಶದ ನಿಜವಾದ ಅಭಿವೃದ್ಧಿ ಸಾಧ್ಯ. ನಮಗೆ ಯುದ್ಧ ಬೇಡ ಗಾಂಧಿ ಬೇಕು. ಅವರನ್ನು ಮರೆತರೆ ಅದರಂತಹ ದುರಂತ ಮತ್ತೊಂದಿಲ್ಲ ಎಂದು ಹೇಳಿದರು.

ಇದೇ ವೇಳೆ ಚನ್ನಮ್ಮ ಹಳ್ಳಿಕೆರೆ, ಡಾ.ಎಂ.ಜಿ.ಕೃಷ್ಣಮೂರ್ತಿ, ಆರ್.ವಾಸುದೇವರಾವ್, ವೇಮಗಲ್ ಸೋಮಶೇಖರ್, ಹೆಚ್.ಎಂ.ಶಿವಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಮುನಲಾಲ್ ಬಜಾಜ್ ಪ್ರಶಸ್ತಿ ಪುರಸ್ಕೃತ ಸುರೇಂದ್ರ ಕೌಲಗಿ, ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ರಾಜಣ್ಣ, ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್, ಹಣಕಾಸು ಅಧಿಕಾರಿ ಪ್ರೊ.ಬಿ.ಮಹದೇವಪ್ಪ, ಗಾಂಧಿ ಭವನದ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ.ಎಸ್.ಎಚ್) ಚಿತ್ರ: ಜಿ.ಕೆ

Leave a Reply

comments

Related Articles

error: