ಪ್ರಮುಖ ಸುದ್ದಿಮೈಸೂರು

ಪರೀಕ್ಷೆಯಲ್ಲಿ ಒಳ್ಳೆಯ  ಅಂಕ ತೆಗೆದುಕೊಳ್ಳುವುದಷ್ಟೇ ಅಲ್ಲ, ದೇಶಕ್ಕೆ ಒಳ್ಳೆಯ ಹೆಸರು ತರಬೇಕು : ಸಚಿವ ಸುರೇಶ್ ಕುಮಾರ್

 ಜೆ ಎಸ್ ಎಸ್ ಹಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವ

ಮೈಸೂರು,ಜ.11:-  ಸುತ್ತೂರು ಜೆ ಎಸ್ ಎಸ್ ಮಹಾವಿದ್ಯಾಪೀಠದ  ಜೆ ಎಸ್ ಎಸ್ ಹಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ಇಂದು  ಹಮ್ಮಿಕೊಳ್ಳಲಾಗಿತ್ತು.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಸುತ್ತೂರು ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್  ರಿಬ್ಬನ್  ಕತ್ತರಿಸಿ ದೀಪಬೆಳಗಿಸುವುದರ  ಮೂಲಕ ಚಾಲನೆ ನೀಡಿದರು. ನಂತರ ರಜತ ಮಹೋತ್ಸವದ ಲಾಂಛನ ಬಿಡುಗಡೆ ಮಾಡಿದರು.

ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳಿಂದ 1991 ರಲ್ಲಿ ಸುತ್ತೂರು ಶ್ರೀ ಮಠದ ಆವರಣದಲ್ಲಿ ಜೆ ಎಸ್ ಎಸ್ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭಿಸಲಾಯಿತು. ಪ್ರಸ್ತುತ 2 ಸಾವಿರಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ರಜತ ಮಹೋತ್ಸವ ಹಿನ್ನಲೆ ಶಾಲಾ ಮಕ್ಕಳಿಂದ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.

ಸಚಿವ ಸುರೇಶ್ ಕುಮಾರ್ ಮಾತನಾಡಿ ಇಂದು ಶಾಲೆಯ ರಜತ ಮಹೋತ್ಸವ ನಡೆಯುತ್ತಿದೆ.ಇದರಲ್ಲಿ ಭಾಗಿಯಾಗಿದ್ದು ಸಂತೋಷ ತಂದಿದೆ. ಮತ್ತೊಂದು ಕಡೆ ನಿಮ್ಮನ್ನ ನೋಡಿದರೇ ನನಗೆ ಹೊಟ್ಟೆ ಕಿಚ್ಚಾಗುತ್ತಿದೆ. ಯಾಕೆಂದರೇ ನಾನು ಈ ಶಾಲೆಯಲ್ಲಿ ಓದಲಿಲ್ಲವಲ್ಲ ಅಂತ. ಈ ಶಾಲೆಯಲ್ಲಿ ಎಲ್ಲಾ ರಾಜ್ಯದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೇಘಾಲಯ, ತ್ರಿಪುರದಿಂದ ಬಂದ ಮಕ್ಕಳು ಇಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿನ  ಗ್ರಂಥಾಲಯವನ್ನು ನಾನು ಎಲ್ಲಿಯೂ ನೋಡಿಲ್ಲ. ಕಂಪ್ಯೂಟರ್ ಕೊಠಡಿ ಇದೆ. ಒಟ್ಟಿನಲ್ಲಿ ಎಲ್ಲಾ ಸೌಲಭ್ಯ, ಉತ್ತಮ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ನಿಮ್ಮ ಪುಣ್ಯ ಎಂದರು.

ಮಹಾತ್ಮಾ ಗಾಂಧೀಯವರ ಶಾಲಾ ದಿನಗಳ ಒಂದೆರಡು ಮಾತುಗಳನ್ನು  ಸುರೇಶ್ ಕುಮಾರ್ ಮಕ್ಕಳಿಗೆ ತಿಳಿಸಿದರು.  ಇಂದು ನೀವು ಪಡೆಯುತ್ತಿರುವ ಶಿಕ್ಷಣ ನಾಳಿನ ಭವಿಷ್ಯಕ್ಕಾಗಿ  ಅದನ್ನು ತಿಳಿದುಕೊಂಡು ಚೆನ್ನಾಗಿ ಓದಿ ಡಾಕ್ಟರ್, ಇಂಜಿನಿಯರ್ ಆಗಿ ಎಂದರು. ನಂತರ ರೈತರಾಗಲು ಎಷ್ಟು ಮಕ್ಕಳಿಗೆ ಇಷ್ಟ ಇದೆ ಹೇಳಿ ಎಂದರು. ಒಂದಷ್ಟು ಮಕ್ಕಳು ರೈತರಾಗಲು ಇಷ್ಟಪಟ್ಟರು. ರೈತರ ಮಹತ್ವ ಎಷ್ಟಿದೆ ಎಂಬುದರ  ಬಗ್ಗೆ ಮಕ್ಕಳಿಗೆ ತಿಳಿಸಿದರು‌

ಪರೀಕ್ಷೆಯಲ್ಲಿ ಒಳ್ಳೆಯ  ಅಂಕ ತೆಗೆದುಕೊಳ್ಳುವುದಷ್ಟೇ ಅಲ್ಲ, ದೇಶಕ್ಕೆ,ಮಠಕ್ಕೆ ಒಳ್ಳೆಯ ಹೆಸರು ತರುವಂತೆ ಬೆಳೆಯಬೇಕು ಎಂದರು‌. ಸಂಜೆ   ಮಹಾತ್ಮ ಗಾಂಧೀಜಿರವರ ಬಾಲ್ಯ ಜೀವನ ಕುರಿತ “ಮೋಹನ ದಾಸ “ಎಂಬ ಚಲನಚಿತ್ರ  ಮಕ್ಕಳ ಜೊತೆ ಕುಳಿತು  ವೀಕ್ಷಿಸಿದರು.

ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ಮಕ್ಕಳ ಭವಿಷ್ಯ ಉಜ್ವಲ ಮಾಡಲು ಈ ಮಠ ಹೊರಟಿದೆ. ನನ್ನ ಕ್ಷೇತ್ರದಲ್ಲಿ ಈ ಮಠ ಇರುವುದು ನಮ್ಮ ಭಾಗ್ಯ. ಇಲ್ಲಿ ಶಿಕ್ಷಣಕ್ಕೆ ಮಾತ್ರ ಒತ್ತು ನೀಡದೇ ನೈತಿಕತೆ ಆಧ್ಯಾತ್ಮಿಕ  ಕಲಿಸಲಾಗುತ್ತಿದೆ. ಎಲ್ಲಾ ಕ್ಷೇತ್ರದಲ್ಲಿಯೂ ಈ ಮಠ ಸಾಧನೆ ಮಾಡಿದೆ. ನಾವು ಓದಿದ ಶಾಲೆಯಲ್ಲಿ ಇಂತಹ ದೊಡ್ಡ ಕಟ್ಟಡಗಳಿರಲಿಲ್ಲ‌.ಆದರೆ ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾವಿರಾರೂ ಮಕ್ಕಳೇ ನೀವೇ ಪುಣ್ಯವಂತರು ಎಲ್ಲರಿಗೂ ಒಳ್ಳೇಯದಾಗಲಿ ಎಂದು ಮಕ್ಕಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಹಿರಿಯ ಸಾಹಿತಿ ಲೇಖಕ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ನಿಧನ ಹಿನ್ನಲೆ ಒಂದು ನಿಮಿಷ ಮೌನಾಚರಿಸಲಾಯಿತು.

ಕಾರ್ಯಕ್ರಮದಲ್ಲಿ  ಕಾರ್ಯನಿರ್ವಾಹಕ ಕಾರ್ಯದರ್ಶಿ ಬೆಟಸೂರ್ ಮಠ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ, ಸೇರಿದಂತೆ ಶಿಕ್ಷಕ ವೃಂದ ಇತರರು ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: