ಪ್ರಮುಖ ಸುದ್ದಿ

ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಿ : ಡಿ.ವೈ.ಎಸ್.ಪಿ ಬಾರಿಕೆ ದಿನೇಶ್ ಕಿವಿಮಾತು

ರಾಜ್ಯ(ಮಡಿಕೇರಿ) ಜ.13 :- ವಿದ್ಯಾರ್ಥಿ ಜೀವನದಲ್ಲಿ ಕೇವಲ ಅಂಕ ಗಳಿಕೆಯೊಂದೇ ಗುರಿಯಾಗದೆ ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳುವಂತಹ ಶಿಕ್ಷಣದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ ಎಂದು ಮಡಿಕೇರಿಯ ಡಿ.ವೈ.ಎಸ್.ಪಿ ಬಾರಿಕೆ ದಿನೇಶ್ ಅಭಿಪ್ರಾಯಪಟ್ಟರು.

ಮರಗೋಡು ಭಾರತಿ ಹೈಸ್ಕೂಲ್ ಸೊಸೈಟಿಯ ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವ ಜನತೆ ಸೂಕ್ಷ್ಮ ಪರಿಸ್ಥಿತಿಗಳಿಗೆ ಸ್ಪಂದಿಸಬೇಕಾದ ರೀತಿಯನ್ನೇ ತಿಳಿಯದ ಸ್ಥಿತಿಯಲ್ಲಿದ್ದಾರೆ. ಇದಕ್ಕೆ ಇಂದಿನ ಅಂಕ ಕೇಂದ್ರಿತ ಶಿಕ್ಷಣವೇ ಕಾರಣ. ಒಂದು ಕಾಲದಲ್ಲಿ ಶಾಂತಿಯ ನೆಲೆವೀಡಿನಂತಿದ್ದ ಕೊಡಗು ಇಂದು ಸೂಕ್ಷ್ಮ ಪ್ರದೇಶವಾಗಿ ಮಾರ್ಪಟ್ಟಿದೆ. ಯುವ ಜನತೆಯು ಯಾವುದೇ ಘಟನೆಯ ಸಂದರ್ಭದಲ್ಲೂ ವಿವೇಚನೆ ರಹಿತವಾಗಿ ವರ್ತಿಸಿದರೆ ಉತ್ತಮ ಭವಿಷ್ಯದಿಂದ ವಂಚಿತರಾಗುತ್ತಾರೆ. ಆದುದರಿಂದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮೌಲ್ಯ ಶಿಕ್ಷಣವನ್ನು ನೀಡಬೇಕು  ಎಂದು ತಿಳಿಸಿದರು.

ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಡಾ. ಕೆ ಎಂ ಭವಾನಿ ಅವರು,  ಮೊಬೈಲ್, ಕಂಪ್ಯೂಟರ್, ಅಂತರ್ಜಾಲಗಳು ಆಧುನಿಕ ಕಾಲದ ಅಗತ್ಯ ಎಂಬುದು ನಿಜವಾದರೂ ಅದನ್ನು ಸದುದ್ದೇಶಕ್ಕೆ ಬಳಸದೆ  ಯುವಜನತೆ ದಾರಿ ತಪ್ಪುವುದು ವರದಿಯಾಗುತ್ತಲೇ ಇದೆ. ಪೋಷಕರು ತಮ್ಮ ಮಕ್ಕಳಿಗೆ ತಾಂತ್ರಿಕ ಸೌಕರ್ಯಗಳನ್ನು ಒದಗಿಸಿದ ಬಳಿಕ ಅದರ ಬಳಕೆ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಗಮನಹರಿಸುವುದು ಒಳಿತು. ವಿದ್ಯಾರ್ಥಿಗಳು ಜೀವನದಲ್ಲಿ ವಿದ್ಯೆಯೇ ನಿಜವಾದ ಆಸ್ತಿ ಎಂಬುದನ್ನು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಾರತಿ ಹೈಸ್ಕೂಲ್ ಸೊಸೈಟಿಯ ಅಧ್ಯಕ್ಷ ಕಟ್ಟೆಮನೆ ಆರ್ ಸೋನಾ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳ ಸಮಸ್ಯೆಯನ್ನು ಅರಿತು ಸಂಸ್ಥೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ನೂತನ ಶಾಲಾ ವಾಹನದ ವ್ಯವಸ್ಥೆ ಏರ್ಪಡಿಸಲಾಗಿದೆ. ಸುಸಜ್ಜಿತವಾದ ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತಿದ್ದು ಮುಂದಿನ ಸಾಲಿನಿಂದ ಆಂಗ್ಲ ಮಾಧ್ಯಮ ಶಾಲೆಯ ಆರಂಭದ ಬಗ್ಗೆ ಚಿಂತನೆ ನಡೆಸಲಾಗಿದೆ. ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆಯನ್ನು ಉದ್ದೀಪನಗೊಳಿಸಲು ರೋಟರಿ ಇಂಟರ್ಯಾಕ್ಟ್ ಕ್ಲಬ್‍ನ ಘಟಕವನ್ನು ಸಂಸ್ಥೆಯಲ್ಲಿ ಆರಂಭಗೊಳಿಸಲಾಗಿದೆ. ಸಂಸ್ಥೆಯು ಈಗಾಗಲೇ 50 ಸಂವತ್ಸರಗಳನ್ನು ಕಂಡಿದ್ದು ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಕೆಲಸ ನಡೆಯುತ್ತಿರುವುದಾಗಿ ತಿಳಿಸಿದರು.

ಸಮಾರಂಭವನ್ನು ಉದ್ದೇಶಿಸಿ ತಾ.ಪಂ.ಸದಸ್ಯ ಅಪ್ರು ರವೀಂದ್ರ, ಹೊಸ್ಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಎನ್ ಮಮತಾ, ಪ್ರಾಂಶುಪಾಲ ಪಿ.ಟಿ ಶಾಜಿ ಮಾತನಾಡಿದರು

ಮುಖ್ಯ ಶಿಕ್ಷಕ ಪಿ.ಎಸ್ ರವಿಕೃಷ್ಣ ಪ್ರಾಸ್ತಾವಿಕ ನುಡಿಗಳನ್ನಾಡಿ ವರದಿ ವಾಚಿಸಿದರು. ವೇದಿಕೆಯಲ್ಲಿ ಭಾರತಿ ಹೈಸ್ಕೂಲ್ ಸೊಸೈಟಿ ಉಪಾಧ್ಯಕ್ಷ ಕೆ.ಎ.ಲವಿನ್, ಕಾರ್ಯದರ್ಶಿ ಬಿ.ಆರ್.ದುಷ್ಯಂತ್, ಖಜಾಂಚಿ ಪಿ.ಎಂ.ಶರತ್, ನಿರ್ದೇಶಕರಾದ ಪಿ.ಜಿ.ಯತೀಶ್, ಕೆ.ಡಿ.ಅನೂಪ್, ಬಿ.ಡಿ.ಜಯಕುಮಾರ್, ಎಂ.ಬಿ.ಚಿದಂಬರ, ಬಿ.ವೈ.ಪ್ರಭುಶೇಖರ್, ಎಂ.ದೇವಯ್ಯ, ಬಿ.ಬಿ.ಕವಿತಾ, ಕೆ.ಎಸ್ ಪೂವಯ್ಯ ಮತ್ತಿತರರು ಇದ್ದರು.

ಎನ್.ಸಿ.ಸಿ ಕೆಡೆಟ್ ವಿದ್ಯಾರ್ಥಿಗಳು ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು.ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ   ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಬಿ.ಟಿ ಮಹೇಶ್ ಸ್ವಾಗತಿಸಿದರೆ, ಕೆ ಎಸ್ ಕೃಷ್ಣ ಹಾಗೂ ಬಿ.ಬಿ ಪೂರ್ಣಿಮ ನಿರೂಪಿಸಿದರು.ಶಾಲಾ ಮಕ್ಕಳು ಪ್ರಾರ್ಥಿಸಿ, ಎಂ.ಪಿ ವೀಣಾ ವಂದಿಸಿದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: