ಮೈಸೂರು

ಕೆಂಪನಂಜಮ್ಮಣ್ಣಿ ಮಹಾರಾಣಿ ಕಾಲೇಜಿನ ಉಗಮದ ರೂವಾರಿ : ಈಚನೂರು ಕುಮಾರ್

ಒಡೆಯರ ಕಾಲದಲ್ಲಿ ಮೈಸೂರಿನಲ್ಲಿ ಸ್ತ್ರೀ ಶಿಕ್ಷಣ ನೀಡಲು ಶ್ರಮಿಸಿದವರಲ್ಲಿ ಮಹಾರಾಣಿ ಕೆಂಪನಂಜಮ್ಮಣ್ಣಿ ಪಾತ್ರ ಬಹಳ ಹಿರಿದಾದುದು ಎಂದು ಸಂಸ್ಕೃತಿ ಚಿಂತಕ ಈಚನೂರು ಕುಮಾರ್  ಅಭಿಪ್ರಾಯಪಟ್ಟರು.

ಗುರುವಾರ  ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಸಾಂಸ್ಕೃತಿಕ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ‘ಶತಮಾನದ ಸಂಭ್ರಮದಲ್ಲಿ ಮಹಾರಾಣಿ ಮಹಿಳಾ ಕಾಲೇಜು’ ಒಂದು ಅವಲೋಕನ ಎಂಬ ವಿಷಯವಾಗಿ  ಅವರು ಮಾತನಾಡಿದರು.

ಮೈಸೂರಿನ ಒಡೆಯರಾದ 10 ನೇ ಜಯಚಾಮರಾಜೇಂದ್ರ ಒಡೆಯರ್ ಅವರ ಕಾಲದಲ್ಲಿ ಸ್ತ್ರೀ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿತ್ತು. ಅವರ ಧರ್ಮಪತ್ನಿ ಕೆಂಪನಂಜಮ್ಮಣ್ಣಿ ಮಹಿಳೆಯರಿಗೆ ವಿದ್ಯಾಭ್ಯಾಸ ಕೊಡಿಸಲು ಮೊದಲ ಬಾರಿಗೆ ವಾಣಿವಿಲಾಸ ಬಾಲಕಿಯರ ಶಾಲೆಯನ್ನು ತೆರೆದರು. ರುಕ್ಮಿಣಿಯಮ್ಮ, ಸುಬ್ಬಮ್ಮ, ಶ್ರೀರಂಗಮ್ಮ ಇನ್ನೂ ಮೊದಲಾದ ಮಹಿಳಾ ಕಣ್ಮಣಿಗಳು ಸಹ ಸ್ತ್ರೀ ಶಿಕ್ಷಣಕ್ಕಾಗಿ ಶ್ರಮಿಸಿದರು ಎಂದು ಸ್ಮರಿಸಿದರು.

ಒಡೆಯರ ಕಾಲದಿಂದಲೇ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಬ್ರಿಟಿಷರು ಸಹ ಇದಕ್ಕೆ ಕೈಜೋಡಿಸಿದ್ದರು. 50 ವರ್ಷ ಬ್ರಿಟಿಷರ ನೇರ ಆಳ್ವಿಕೆಗೆ ಒಳಪಟ್ಟಿದ್ದ ಮೈಸೂರು ಮಹಿಳಾ ಶೈಕ್ಷಣಿಕ ರಂಗದಲ್ಲಿ ಇಡೀ ಭಾರತದಲ್ಲಿಯೇ ಹೆಸರು ಮಾಡಿತು ಎಂದರು.

ಮಹಾರಾಣಿ ಕಾಲೇಜು ಮೊದಲು ವಾಣಿವಿಲಾಸ, ಬಾಲಿಕಾ ಪ್ರೌಢಶಾಲೆ ಎಂದು ಕರೆಯಲ್ಪಡುತ್ತಿದ್ದು, ನಂತರ 1900 ರಲ್ಲಿ ಮಹಾರಾಣಿ ಕಾಲೇಜು ಆಗಿ ನಾಮಕರಣಗೊಂಡಿತು. ಮಹಾರಾಣಿ ಮಹಿಳಾ ಕಾಲೇಜಿಗೆ 116 ವರ್ಷಗಳ ಇತಿಹಾಸವಿದ್ದು, ಶತಮಾನವನ್ನು ಕಳೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಂಘದ ಅಧ‍್ಯಾಪಕ ಕಾರ್ಯದರ್ಶಿ ಡಾ.ಡಿ.ರವಿ, ಅಧ‍್ಯಾಪಕ ಕೋಶಾ‍ಧಿಕಾರಿ ಎಂ.ಬಾಲಕೃಷ್ಣ, ಅಧ್ಯಾಪಕಿ ವಿಜಯಕುಮಾರಿ ಉಪಸ್ಥಿತರಿದ್ದರು. (ಎಲ್.ಜಿ.ಎಸ್.ಎಚ್)ಚಿತ್ರ: ಜಿ.ಕೆ

 

Leave a Reply

comments

Related Articles

error: