
ಮೈಸೂರು
ಎಪಿಎಂಸಿಯಲ್ಲಿ ಎಸ್ಎಂಪಿ ಕ್ಯಾಂಟಿನ್, ಶುದ್ಧ ಕುಡಿಯುವ ನೀರಿನ ಘಟಕ: ಎಸ್.ಎಂ.ಶಿವಪ್ರಕಾಶ್
ಮೈಸೂರು,ಜ.14-ನಗರದ ಎಪಿಎಂಸಿ ಆವರಣದಲ್ಲಿ ಎಸ್ಎಂಪಿ ಕ್ಯಾಂಟಿನ್ ಮತ್ತು ಎಸ್ಎಂಪಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯುವುದಾಗಿ ಎಸ್ಎಂಪಿ ಫೌಂಡೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಯುವ ಮುಖಂಡ ಎಸ್.ಎಂ.ಶಿವಪ್ರಕಾಶ್ ತಿಳಿಸಿದರು.
ಬಂಡಿಪಾಳ್ಯದ ಎಪಿಎಂಸಿ ತರಕಾರಿ ಮಾರುಕಟ್ಟೆ ಆವರಣದಲ್ಲಿ ಹಣ್ಣು ಮತ್ತು ತರಕಾರಿ ದಲ್ಲಾಳಿಗಳಾದ ರವಿ ಮತ್ತು ಆರ್.ಎಕ್ಸ್.ರವಿ ಸ್ನೇಹಿತರು ಇತ್ತೀಚೆಗೆ ಏರ್ಪಿಡಿಸಿದ್ದ ತಮ್ಮ ಹುಟ್ಟುಹಬ್ಬ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಎಪಿಎಂಸಿ ಆವರಣದ ಬಿ ಬ್ಲಾಕ್ನಲ್ಲಿ ಕ್ಯಾಂಟಿನ್ ಮತ್ತು ಶುದ್ಧ ಕುಡಿಯುವ ನೀರಿನ ಕೇಂದ್ರ ತೆರೆಯಲು ಅನುಮತಿ ಮತ್ತು ಸ್ಥಳವಕಾಶ ನೀಡಬೇಕೆಂದು ಎಪಿಎಂಸಿ ಅಧ್ಯಕ್ಷರಾದ ಕೆ.ಪ್ರಭುಸ್ವಾಮಿ ಅವರಿಗೆ ಮನವಿ ಮಾಡಿದರು.
ಶಿವಪ್ರಕಾಶ್ ಅವರ ಮನವಿಗೆ ಸ್ಪಂದಿಸಿದ ಕೆ.ಪ್ರಭುಸ್ವಾಮಿ, ಮುಂದಿನ ಎಪಿಎಂಸಿ ಸಭೆಯಲ್ಲಿ ಚರ್ಚಿಸಿ ಕ್ಯಾಂಟಿನ್, ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ಸ್ಥಳವಕಾಶ ಮಾಡಿಕೊಡಲಾಗುವುದು. ಮಾರುಕಟ್ಟೆಯಲ್ಲಿ ಕೂಲಿ ಕಾರ್ಮಿಕರಿಗೆ ಅನುಕೂಲವಾಗುವುದಾದರೆ ಎಲ್ಲ ರೀತಿಯ ನೆರವು ನೀಡುತ್ತೇವೆ ಎಂದು ಹೇಳಿದರು.
ಅನ್ನ ಸಂತರ್ಪಣೆ: ಎಸ್.ಎಂ.ಶಿವಪ್ರಕಾಶ್ ಅವರ ಹುಟ್ಟುಹಬ್ಬದ ಅಂಗವಾಗಿ ೧ ಸಾವಿರ ಮಂದಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಎಪಿಎಂಸಿ ಉಪಾಧ್ಯಕ್ಷ ಜವರಪ್ಪ, ವರ್ತಕರ ಸಂಘದ ಅಧ್ಯಕ್ಷ ಎಸ್.ಆರ್.ಎಸ್.ಪ್ರಕಾಶ್, ತರಕಾರಿ ಮಾರುಕಟ್ಟೆ ಸಂಘದ ಅಧ್ಯಕ್ಷ ಮಂಡ್ಯ ಸತೀಶ್, ಉದ್ಯಮಿ ಮಂಜುನಾಥ್ ಸಿಂಗ್, ಜಾ.ದಳ ಯುವ ಮುಖಂಡ ಪುರುಷೋತ್ತಮ್, ಎಪಿಎಂಸಿಯ ತರಕಾರಿ ಮಾರುಕಟ್ಟೆ ದಲ್ಲಾಳಿಗಳು ಭಾಗವಹಿಸಿದ್ದರು. (ಎಂ.ಎನ್)