ಪ್ರಮುಖ ಸುದ್ದಿ

ಸಿದ್ದರಾಮೇಶ್ವರರ ಜೀವನಾದರ್ಶಗಳನ್ನು ಎಲ್ಲರೂ ಪಾಲಿಸಿ : ಜಿಲ್ಲಾಧಿಕಾರಿ ಸಲಹೆ

ರಾಜ್ಯ( ಮಡಿಕೇರಿ) ಜ.15 :- ಶಿವಯೋಗಿ ಸಿದ್ದರಾಮೇಶ್ವರರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅವರ ವೈಚಾರಿಕ ಪೂರ್ಣ ವಿಚಾರಗಳನ್ನು ಇಂದು ನಾವು ಅರಿಯುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯು ನಗರದ ಡಿ.ದೇವರಾಜ ಅರಸು ಭವನದಲ್ಲಿ ಮಂಗಳವಾರ ನಡೆಯಿತು.
ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಿದ್ದರಾಮೇಶ್ವರರ ಜೀವನಾದರ್ಶಗಳನ್ನು ಜನರಿಗೆ ತಲುಪಿಸಬೇಕಿದೆ. ಸಿದ್ದರಾಮೇಶ್ವರರು ಜನಾಂಗವೊಂದಕ್ಕೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಆದರ್ಶನೀಯರು ಎಂದು ನುಡಿದರು.
ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷರಾದ ಲೋಕೇಶ್ ಸಾಗರ್ ಅವರು ಮಾತನಾಡಿ ಶಿವಯೋಗಿ ಸಿದ್ದರಾಮೇಶ್ವರರು ಜಗತ್ತಿಗೆ ಬೇಕಾದ ಒಬ್ಬ ಶ್ರೇಷ್ಠ ಸಂತ. ಯುವ ಜನಾಂಗದವರು ಇವರ ಆದರ್ಶನೀಯ, ಕಾಯಕಪೂರ್ಣ ಜೀವನವನ್ನು ಪಾಲಿಸುವಂತಾಗಬೇಕು ಎಂದರು.
ಸಿದ್ದರಾಮೇಶ್ವರರು ಕೆರೆ-ಕಟ್ಟೆಗಳನ್ನು ನಿರ್ಮಿಸಿ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ವಚನಗಳ ಮೂಲಕ ಸಮಾಜವನ್ನು ಅಂದೇ ತಿದ್ದುವ ಕಾರ್ಯವನ್ನೂ ಸಹ ಮಾಡಿದ್ದಾರೆ ಎಂದು ನುಡಿದರು.
ಚಿಕ್ಕಅಳುವಾರದಲ್ಲಿನ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕರಾದ ಜಮೀರ್ ಅಹ್ಮದ್ ಅವರು ಮಾತನಾಡಿ, ಶಿವಯೋಗಿ ಸಿದ್ದರಾಮೇಶ್ವರ 12ನೇ ಶತಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿಗೆ ಭದ್ರ ಬುನಾದಿಯನ್ನು ಹಾಕಿದವರಲ್ಲಿ ಒಬ್ಬರು ಎಂದರು.
ಸಿದ್ದರಾಮೇಶ್ವರರ ಚಿಂತನೆ, ಸಾಮಾಜಿಕ ಚಟುವಟಿಕೆಗಳನ್ನು ಅವರು ಬೆಳೆಸಿದರು. ಖುದ್ದು ಅಲ್ಲಮ ಪ್ರಭುವೇ ಸಿದ್ದರಾಮೇಶ್ವರರ ಬಗ್ಗೆ ಅರಿಯಲು ಅವರನ್ನು ಹುಡುಕಿಕೊಂಡು ಹೋಗಿ ಭೇಟಿಯಾಗಿದ್ದರು. ಅಷ್ಟರ ಮಟ್ಟಿಗಿನ ಪ್ರಭಾವ ಅವರ ವಚನಗಳಿಗಿತ್ತು ಎಂದು ತಿಳಿಸಿದರು.
ಸಾಧಕರ, ಸಂತರ ಜಾತಿ ಧರ್ಮಗಳಿಗಿಂತ ಅವರ ಚಿಂತನೆಗಳಷ್ಟೇ ನಮಗೆ ಮುಖ್ಯ ಎಂದು ನುಡಿದರು. ಕಾಯಕಕ್ಕೆ ಹೆಚ್ಚಿನ ಒತ್ತು ನೀಡಿ ಬಡವರ ಕಲ್ಯಾಣಕ್ಕಾಗಿ ದುಡಿದರು. ಬಹಳ ಹಿಂದೆಯೇ ಸ್ತ್ರೀ-ಪುರುಷರು ಸಮಾನರು ಎಂಬ ಸಂದೇಶವನ್ನು ಸಾರಿದರು. ಜೊತೆಗೆ ಸಾಮೂಹಿಕ ವಿವಾಹಗಳ ಮೂಲಕ ಕುಲದ ಭೇದವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿವಯೋಗಿ ಸಿದ್ದರಾಮೇಶ್ವರರ ವಚನಗಳನ್ನು ಸಹ ಪ್ರಸ್ತುತ ಪಡಿಸಿದರು.
ಮೈಸೂರಿನ ಡಾ.ರಾಘವೇಂದ್ರ ಪ್ರಸಾದ್ ತಂಡದವರು ನಾಡಗೀತೆ ಮತ್ತು ವಚನಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಪೌರಾಯುಕ್ತರಾದ ರಮೇಶ್, ಐಟಿಡಿಪಿ ಇಲಾಖೆಯ ಅಧಿಕಾರಿಗಳಾದ ಶಿವಕುಮಾರ್, ಕರ್ನಾಟಕ ಭೋವಿ ಮಹಾಸಭಾದ ಜಿಲ್ಲಾಧ್ಯಕ್ಷರಾದ ಡಿ.ಸುಜಿತ್, ಗೌರವಾಧ್ಯಕ್ಷರಾದ ಆರ್.ಸಿ.ವಿಜಯ್ ಹಾಜರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್ ಸ್ವಾಗತಿಸಿದರು, ಮಣಜೂರು ಮಂಜುನಾಥ್ ಅವರು ನಿರೂಪಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: