ಮೈಸೂರು

ಶಿಕ್ಷಕರನ್ನು ಜೈಲಿಗೆ ಕಳುಹಿಸಲಾಗುವುದು: ಶಿಕ್ಷಣ ಸಚಿವರ ಹೇಳಿಕೆಗೆ ಖಂಡನೆ

ಮೌಲ್ಯ ಮಾಪನ ಬಹಿಷ್ಕರಿಸುವ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಲ್ಲದೇ, 6 ತಿಂಗಳು ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿರುವ ಶಿಕ್ಷಣ ಸಚಿವರ ಹೇಳಿಕೆಯನ್ನು ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ತೀವ್ರವಾಗಿ ಖಂಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಶಿಕ್ಷಣ ಸಚಿವ ತನ್ವೀರ್‍ ಸೇಠ್‍ರವರು ನೀಡಿರುವ ಹೇಳಿಕೆಗೆ ನಮ್ಮ ವಿರೋಧವಿದೆ. ಸಚಿವರು ಶಿಕ್ಷಕರನ್ನು ಅಪರಾಧಿಗಳಂತೆ ಕಾಣುತ್ತಿದ್ದಾರೆ. ಅವರ ಹೇಳಿಕೆ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಳೆದ 18 ವರ್ಷಗಳಿಂದ ಶಿಕ್ಷಕರು ಮತ್ತು ಸರ್ಕಾರದ ನಡುವೆ ವೇತನ ಸಮಸ್ಯೆ ಕುರಿತು ತಿಕ್ಕಾಟವಿದೆ. ಉಪನ್ಯಾಸಕರು ಯಾರೂ ಏಕಾಏಕಿ ಮೌಲ್ಯಮಾಪನವನ್ನು ಬಹಿಷ್ಕರಿಸಿಲ್ಲ. 6 ತಿಂಗಳಿನಿಂದ ಸರ್ಕಾರದ ಗಮನ ಸೆಳೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಯದೆಂಬಂತೆ ಮೌಲ್ಯ ಮಾಪನ ಬಹಿಷ್ಕಾರದ ಮೂಲಕ ಹಕ್ಕೊತ್ತಾಯ ಮಾಡಲಾಗುತ್ತಿದೆ. ಈ ಕುರಿತು ಮಾ.26ರಂದು ರಾಜ್ಯಮಟ್ಟದ ಸಭೆ ಕರೆದಿದ್ದು ಮೌಲ್ಯಮಾಪನ ಬಹಿಷ್ಕಾರ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

 

ವೇತನ ತಾರತಮ್ಯ ವಿಚಾರದಲ್ಲಿ ಶಿಕ್ಷಣ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಶಿಕ್ಷಕರೊಂದಿಗೆ ಸಂಘರ್ಷಕ್ಕೆ ಇಳಿದಿದ್ದಾರೆ. ಜೈಲಿಗೆ ಕಳುಹಿಸುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಆಲೋಚನೆಗೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಅವರು  ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪನ್ಯಾಸಕ ಸಂಘದ ಲೋಕೇಶ್, ಡಾ.ಎ.ಬಿ. ಮಹೇಶ್  ಹಾಜರಿದ್ದರು. (ಎಲ್.ಜಿ. ಎಸ್.ಎಚ್)

Leave a Reply

comments

Related Articles

error: