ಮೈಸೂರು

ಬಡ್ತಿ ಮೀಸಲಾತಿ ಕುರಿತು ವಿಚಾರ ಸಂಕಿರಣ :ಮಾ.12 ರಂದು

ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ ಸಂಸ್ಥೆಗಳ ಪ.ಜಾತಿ,ವರ್ಗದ ಅಧಿಕಾರಿ, ನೌಕರರ ಪರಿಷತ್ ಮತ್ತು ದಲಿತ ವಿದ್ಯಾರ್ಥಿ ಒಕ್ಕೂಟ ಸಂಯುಕ್ತವಾಗಿ ಮಾ.12ರಂದು ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಬಡ್ತಿ ಮೀಸಲಾತಿ ರದ್ದತಿ ತೀರ್ಪನ್ನು ಕುರಿತ ವಿಚಾರ ಸಂಕಿರಣವನ್ನು ಏರ್ಪಡಿಸಿದೆ ಎಂದು ಪರಿಷತ್ ನ  ಗೌರವಾಧ್ಯಕ್ಷ ಶಾಂತರಾಜು ಹೇಳಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ  ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ  ಅವರು, ಅಂದು ಬೆಳಗ್ಗೆ 11ಕ್ಕೆ ರಾಷ್ಟ್ರೀಯ ಪ.ಜಾತಿ ಆಯೋಗದ ಮಾಜಿ ಅಧ್ಯಕ್ಷ ಎಚ್. ಹನುಮಂತಪ್ಪ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದು, ಮಾಜಿ ಸಂಸದ ಎಚ್. ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ನ್ಯಾಯಶಾಸ್ತ್ರದ ಪ್ರಾಧ್ಯಾಪಕ  ಪ್ರೊ.ಸಿ. ಬಸವರಾಜು ಮುಖ್ಯ ಭಾಷಣ ಮಾಡಲಿದ್ದು, ಹಂಗಾಮಿ ಕುಲಪತಿ  ಪ್ರೊ. ದಯಾನಂದ ಮಾನೆ, ಚಿಂತಕ ಶಬ್ಬೀರ್ ಮುಸ್ತಫಾ ಭಾಗವಹಿಸುವರು ಎಂದು  ತಿಳಿಸಿದರು.

ಮಧ್ಯಾಹ್ನ 12.30ಕ್ಕೆ `ಮೀಸಲಾತಿ ಒಂದು ಅವಲೋಕನ’ ವಿಚಾರ ಕುರಿತು ವಕೀಲ ಸಿ. ಜಗದೀಶ್, ಪ್ರಾಧ್ಯಾಪಕಿ  ಪ್ರೊ.ಯಶೋದಾ ವಿಚಾರ ಮಂಡಿಸಲಿದ್ದು, ಪತ್ರಿಕೋದ್ಯಮ ಪ್ರಾಧ್ಯಾಪಕ  ಪ್ರೊ. ಬಿ.ಪಿ. ಮಹೇಶ್‍ಚಂದ್ರ ಗುರು ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಎಸ್‍ಸಿ, ಎಸ್‍ಟಿಗಳಿಗೆ ಪರಿಣಾಮ ಬೀರುತ್ತಿರುವ ನ್ಯಾಯಾಲಯದ ತೀರ್ಪುಗಳು ವಿಚಾರ ಕುರಿತು ಪ್ರಾಧ್ಯಾಪಕರಾದ ಡಾ.ವಿದ್ಯಾ ಚಂದಾವರ ಮತ್ತು  ಪ್ರೊ.ಡಿ. ಆನಂದ್ ವಿಚಾರ ಮಂಡಿಸಲಿದ್ದು ಪ್ರಗತಿಪರ ಚಿಂತಕ  ಪ್ರೊ.ಕೆ.ಎಸ್. ಭಗವಾನ್ ಅಧ್ಯಕ್ಷತೆ ವಹಿಸುತ್ತಾರೆ ಎಂದರು.
ಸಂಜೆ 4 ಗಂಟೆಗೆ ಸಮಾರೋಪ ನಡೆಯಲಿದ್ದು ವಕೀಲ ಡಾ.ಸಿ.ಎಸ್. ದ್ವಾರಕನಾಥ್ ಸಮಾರೋಪ ಭಾಷಣ ಮಾಡಲಿದ್ದಾರೆ. ಶಾಸಕ ಉಗ್ರಪ್ಪ ಅಧ್ಯಕ್ಷತೆ ವಹಿಸುತ್ತಾರೆ ಎಂದು ಅವರು  ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್‍ನ ಗೌರವ ಕಾರ್ಯದರ್ಶಿ ಚಿಕ್ಕಂದಾನಿ, ಗೌರವ ಸಲಹೆಗಾರ ಕೆ. ಗೋವಿಂದರಾಜು ಉಪಸ್ಥಿತರಿದ್ದರು.

Leave a Reply

comments

Related Articles

error: