ಮೈಸೂರು

ಸುತ್ತೂರು ಶ್ರೀಕ್ಷೇತ್ರದಲ್ಲಿ ಜ.21-26 ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ

ಮೈಸೂರು,ಜ.17:- ಮೈಸೂರು ಜಿಲ್ಲೆ ಸುತ್ತೂರು ಶ್ರೀಕ್ಷೇತ್ರದಲ್ಲಿ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಇದೇ ಜನವರಿ 21 ಮಂಗಳವಾರದಿಂದ 26 ಭಾನುವಾರದವರೆಗೆ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ ಎಂದು ಜಾತ್ರಾ ಮಹೋತ್ಸವದ ಪ್ರಧಾನ ಕಾರ್ಯದರ್ಶಿ ಮಂಜುನಾಥ ತಿಳಿಸಿದರು.

ಸುತ್ತೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು  ಆರು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಜನವರಿ 21 ರಂದು ವೀರಭದ್ರೇಶ್ವರ ಕೊಂಡೋತ್ಸವ, 23 ರಂದು ರಥೋತ್ಸವ, 24 ರಂದು ಮಹದೇಶ್ವರ ಕೊಂಡೋತ್ಸವ, 25 ರಂದು ತೆಪ್ಪೋತ್ಸವಗಳ ಜೊತೆಗೆ ಲಕ್ಷದೀಪೋತ್ಸವ, ಹಾಲ್ಗರವಿ ಉತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು, ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾಚಟುವಟಿಕೆಗಳು ಜರುಗಲಿವೆ ಎಂದರು.

ಜನವರಿ 22 ಬುಧವಾರದಂದು ಕರ್ತೃ ಗದ್ದುಗೆಯಲ್ಲಿ ಶ್ರೀ ನಂಜುಂಡೇಶ್ವರ, ನಂದಿ ಹಾಗೂ ವಿನಾಯಕ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ವರ್ಷ 28ನೇ ರಾಜ್ಯಮಟ್ಟದ ಭಜನಾ ಮತ್ತು ಏಕತಾರಿ ಸ್ಪರ್ಧೆ ನಡೆಯಲಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸುಮಾರು 700 ಕ್ಕೂ ಹೆಚ್ಚು ಪುರುಷ, ಮಹಿಳಾ, ಮಕ್ಕಳ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟು ಏಳು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಪ್ರತಿ ವಿಭಾಗಕ್ಕೂ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುವುದು.

ಜಾತ್ರೆಯ ಪ್ರಮುಖ ಆಕರ್ಷಣೆಯಾದ ವಸ್ತುಪ್ರದರ್ಶನದಲ್ಲಿ ಕೈಗಾರಿಕೋತ್ಪನ್ನಗಳು, ಕೈಮಗ್ಗ, ಜವಳಿ, ಕರಕುಶಲ ಉತ್ಪನ್ನಗಳು, ಗ್ರಾಮೀಣ ಉತ್ಪನ್ನಗಳು, ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಗೃಹಬಳಕೆ ಉತ್ಪನ್ನಗಳು ಹಾಗೂ ಗುಡಿ ಕೈಗಾರಿಕೆ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಇರುತ್ತದೆ. ಜೆಎಸ್‌ಎಸ್ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸಿದ್ಧಪಡಿಸಿರುವ 200 ಕ್ಕೂ ಹೆಚ್ಚು ಶಿಕ್ಷಣ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳಿರುತ್ತವೆ. ಸರ್ಕಾರದ ಅಭಿವೃದ್ಧಿ ಇಲಾಖೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಮಹಿಳಾ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ವೈದ್ಯಕೀಯ ಹಾಗೂ ತಾಂತ್ರಿಕ ವಸ್ತುಪ್ರದರ್ಶನವು ಇರುತ್ತದೆ.

ಕೃಷಿ ಮೇಳ

ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ತಾಂತ್ರಿಕತೆಯ ಬಗ್ಗೆ ರೈತರಿಗೆ ಮಾಹಿತಿ ನೀಡಲು ಈ ಮೇಳವನ್ನು ಆಯೋಜಿಸಲಾಗಿದೆ. ಸಮಗ್ರ ಬೆಳೆ ನಿರ್ವಹಣೆ, ವೈವಿಧ್ಯಮಯ ಬೆಳೆಗಳ ಪ್ರಾತ್ಯಕ್ಷಿಕೆ ಇರುತ್ತದೆ. ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಹನಿ ನೀರಾವರಿಯಲ್ಲಿ ಬತ್ತ ಬೆಳೆಯುವ ಪ್ರಾತ್ಯಕ್ಷಿಕೆ, ಒಂದು ಎಕರೆಯಲ್ಲಿ “ಕೃಷಿ ಬ್ರಹ್ಮಾಂಡ” ಪ್ರದರ್ಶನ, ಸಿರಿ ಧಾನ್ಯಗಳು, ದ್ವಿದಳ ಧಾನ್ಯಗಳ ವಿವಿಧ ತಳಿಗಳ ಪ್ರದರ್ಶನವಿರುತ್ತದೆ. ಅತಿ ಹೆಚ್ಚು ಸಸಾರಜನಕ, ಶರ್ಕರ, ಪಿಷ್ಟ ಹಾಗೂ ನಾರು ಹೊಂದಿರುವ ವಿದೇಶಿ ಬೆಳೆಗಳಾದ ಚಿಯಾ ಮತ್ತು ಟೆಫ್‌ಗಳ ಪ್ರದರ್ಶನವಿರುತ್ತದೆ. ಹಸು, ಕುರಿ, ಮೇಕೆ, ಕೋಳಿಗಳ ದೇಸಿ ತಳಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಜ. 24ರ ಶುಕ್ರವಾರದಂದು ಸಾವಯುವ ಕೃಷಿ ಮತ್ತು ಜಲ ವೈಜ್ಞಾನಿಕ ಬಳಕೆ ಕುರಿತು ಕೃಷಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.

1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಬೇರೆ ಬೇರೆ ಗುಂಪುಗಳಲ್ಲಿ ಸ್ಥಳದಲ್ಲೇ ಚಿತ್ರ ಬರೆಯುವ ರಾಜ್ಯಮಟ್ಟದ ಸ್ಪರ್ಧೆ 25 ರಂದು ಬೆಳಗ್ಗೆ 10  ಗಂಟೆಗೆ ಪ್ರಾರಂಭವಾಗಲಿದೆ.

ರಾಜ್ಯದ ಕಲಾವಿದರ ಜೊತೆಗೆ ಹೊರ ರಾಜ್ಯಗಳ ಕಲಾವಿದರುಗಳಿಂದ ಕಲಾಕೃತಿಗಳ ಪ್ರದರ್ಶನ, ಮಾರಾಟ ಹಾಗೂ ಸ್ಥಳದಲ್ಲೇ ಸಾರ್ವಜನಿಕರ ಭಾವಚಿತ್ರ ರಚನೆಮಾಡಿ ಮಾರಾಟ ಮಾಡುವ ವ್ಯವಸ್ಥೆಯು ಜಾತ್ರೆಯ ಎಲ್ಲಾ ದಿನಗಳಲ್ಲಿಯೂ ಇರುತ್ತದೆ.

 ಸಾಮೂಹಿಕ ವಿವಾಹ

ಜ. 22 ರಂದು ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ಜಾತಿ-ಮತ ಭೇದವಿಲ್ಲದೆ ಸರ್ವಧರ್ಮಗಳ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸಾಮೂಹಿಕ ವಿವಾಹದಲ್ಲಿ ಅಂತರ್ಜಾತಿ, ವಿಶೇಷ ಚೇತನರು ಹಾಗೂ ಹೊರ ರಾಜ್ಯಗಳ ವಧೂ-ವರರು ಸಹ ಪಾಲ್ಗೊಳ್ಳಲಿದ್ದಾರೆ. ವಿವಾಹಗಳ ನೋಂದಣಿಯನ್ನು ಮಾಡಿಸಲಾಗುತ್ತದೆ. ವಧುವಿಗೆ ಸೀರೆ, ಕುಪ್ಪಸ, ಮಾಂಗಲ್ಯ ಹಾಗೂ ಕಾಲುಂಗುರಗಳನ್ನು, ವರನಿಗೆ ಪಂಚೆ, ವಲ್ಲಿ, ಷರ್ಟ್‌ಗಳನ್ನು ನೀಡಲಾಗುತ್ತದೆ. ಸಾಮೂಹಿಕ ವಿವಾಹ ವ್ಯವಸ್ಥೆಯಲ್ಲಿ ಈವರೆಗೆ 2,900ಕ್ಕೂ ಹೆಚ್ಚು ಮಂದಿ ದಂಪತಿಗಳಾಗಿದ್ದಾರೆ. ವಧೂ-ವರರು ವಿವಾಹದ ದೃಢೀಕರಣಪತ್ರ ಹಾಗೂ ನೋಂದಣಿಪತ್ರಗಳನ್ನು ಸಲ್ಲಿಸಿ, ಸರ್ಕಾರ ನೀಡುವ ಪ್ರೋತ್ಸಾಹಧನವನ್ನು ಸ್ವಂತ ಜವಾಬ್ದಾರಿಯಿಂದ ಪಡೆದುಕೊಳ್ಳಬಹುದಾಗಿದೆ.

ಪ್ರತಿದಿನ ಬೆಳಗ್ಗೆ ಅಕ್ಕಪಕ್ಕದ ಗ್ರಾಮಗಳಲ್ಲಿ ಸ್ನೇಹ-ಸೌಹಾರ್ದ-ಶಾಂತಿ ಪ್ರಾರ್ಥನಾ ಸಂಚಲನದ ಪ್ರಭಾತ್ ಪೇರಿ ಇರುತ್ತದೆ. ನಂತರ ಶ್ರೀಗಳವರೊಬ್ಬರು ಧ್ವಜಾರೋಹಣ ನೆರವೇರಿಸುತ್ತಾರೆ. ಮತ್ತೊಬ್ಬರು ಧರ್ಮಸಂದೇಶ ನೀಡುತ್ತಾರೆ.

ಗ್ರಾಮೀಣ ಕಲೆಗಳಾದ ಸೋಬಾನೆಪದ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಜ.21 ಮಂಗಳವಾರದಂದು, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಳಿಪಟ ಸ್ಪರ್ಧೆಯನ್ನು ಜ.24 ಶುಕ್ರವಾರದಂದು ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಜ. 24 ಶುಕ್ರವಾರದಂದು ಮೈಸೂರಿನ ವಿವಿಧ ಮಹಿಳಾ ಬಳಗಗಳಿಂದ ಮಹಾತ್ಮ ಗಾಂಧೀಜಿಯವರ ಬದುಕು ಮತ್ತು ಸಂದೇಶ ಕುರಿತ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜ. 25 ಶನಿವಾರದಂದು 40ನೇ ರಾಷ್ಟ್ರಮಟ್ಟದ ನಾಡ ಕುಸ್ತಿ ಪಂದ್ಯಗಳು ನಡೆಯಲಿವೆ. ಈ ಬಾರಿ ಎರಡು ಮಾರ್‌ ಪಿಟ್ ಕುಸ್ತಿಗಳಿರುತ್ತದೆ. ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಿಗೆ ‘ಸುತ್ತೂರು ಕೇಸರಿ ಪ್ರಶಸ್ತಿ ಹಾಗೂ ಸ್ಥಳೀಯ ಉತ್ತಮ ಕುಸ್ತಿ ಸ್ಪರ್ಧೆ ವಿಜೇತರಿಗೆ ‘ಸುತ್ತೂರು ಕುಮಾರ ಪ್ರಶಸ್ತಿ’ಗಳನ್ನು ನೀಡಲಾಗುವುದು.

ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಕ್ಯಾನ್ಸರ್ ತಡೆಗಟ್ಟುವ ಬಗ್ಗೆ ಸಲಹೆ, ಸೂಚನೆ ಹಾಗೂ ವಿವಿಧ ರೀತಿಯ ಕ್ಯಾನ್ಸರ್‌ಗಳ ಬಗ್ಗೆ ಪರೀಕ್ಷೆಗಳನ್ನು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಲಾಗಿದೆ.

ಸಾರ್ವಜನಿಕರ ಮನರಂಜನೆಗಾಗಿ ಜಾತ್ರೆಯ ಎಲ್ಲ ದಿನಗಳಲ್ಲಿಯೂ ದೋಣಿ ವಿಹಾರವನ್ನು ಏರ್ಪಡಿಸಲಾಗಿದೆ.

ಪುರುಷರಿಗೆ ಜ.23 ಗುರುವಾರದಂದು ಮತ್ತು ಮಹಿಳೆಯರಿಗೆ ಜ.24 ಶುಕ್ರವಾರದಂದು ಹಾಗೂ ವಿದ್ಯಾರ್ಥಿಗಳಿಗೆ 23 ಗುರುವಾರದಿಂದ ಜ.25 ಶನಿವಾರದವರೆಗೆ ದೇಸಿ ಆಟಗಳಾದ ಕೆಸರುಗದ್ದೆ ಓಟ, ಹಗ್ಗ-ಜಗ್ಗಾಟ, ಕುಂಟೆಬಿಲ್ಲೆ, ಅಳಿಗುಳಿ ಮನೆ, ಅಣ್ಣೆಕಲ್ಲು, ಚದುರಂಗ, ಚೌಕಬಾರ ಜೊತೆಗೆ 50 ಕೆಜಿ ತೂಕದ ಚೀಲ ಹೊತ್ತುಕೊಂಡು ಓಡುವುದು, ಕಲ್ಲುಗುಂಡು ಎತ್ತುವುದು, ನೀರು ತುಂಬಿದ ಬಿಂದಿಗೆಯನ್ನು ತಲೆಯ ಮೇಲೆ ಹೊತ್ತು ಓಡುವುದು ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿಜೇತರಾದವರಿಗೆ ನಗದು ಬಹುಮಾನ, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿಪತ್ರ ನೀಡಲಾಗುವುದು.

ದನಗಳ ಜಾತ್ರೆಯನ್ನು ಆರಂಭಿಸಿ 52 ವರ್ಷಗಳಾಗಿದೆ. ವಿವಿಧ ಬಗೆಯ ರಾಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಉತ್ತಮ ರಾಸುಗಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು.

ಜೆಎಸ್‌ಎಸ್‌ ಅಂತರಸಂಸ್ಥೆಗಳ ಸಾಂಸ್ಕೃತಿಕ ಮೇಳದಲ್ಲಿ 3,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಭರತನಾಟ್ಯ, ಸಾಮೂಹಿಕ ನೃತ್ಯ, ಶಾಸ್ತ್ರೀಯ ಸಂಗೀತ, ವಚನಾಧಾರಿತ ನೃತ್ಯ, ಸಾಮೂಹಿಕ ಗಾಯನ ಸ್ಪರ್ಧೆಗಳ ಮೂಲಕ ಸುಮಾರು 450ಕ್ಕೂ ಹೆಚ್ಚು ಕಾರ್ಯಕ್ರಮಗಳಿರುತ್ತವೆ. ಪ್ರತಿ ದಿನ ಸಂಜೆ 7 ರಿಂದ 9 ರವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಹೊರಗಿನ ಕಲಾವಿದರು ನೀಡುತ್ತಾರೆ.

ಗದ್ದುಗೆಯ ಆವರಣದಲ್ಲಿ ನಗರಪ್ರದೇಶಗಳ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಂದ ಗಾಯನ, ನೃತ್ಯ ಹಾಗೂ ನಾಟಕಗಳಿರುತ್ತದೆ. ಗ್ರಾಮಾಂತರ ಪ್ರದೇಶದ ನಾಟಕ ತಂಡಗಳಿಂದ ಇಪ್ಪತ್ತಕ್ಕೂ ಹೆಚ್ಚು ಪೌರಾಣಿಕ ನಾಟಕಗಳು ಏಕಕಾಲದಲ್ಲಿ ನಾಲ್ಕು ವೇದಿಕೆಗಳಲ್ಲಿ ಪ್ರದರ್ಶನಗೊಳ್ಳುತ್ತವೆ.

ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಮೈಸೂರು ನಗರ ಪಾಲಿಕೆ ವತಿಯಿಂದ ಪ್ಲಾಸ್ಟಿಕ್ ನಿಷೇಧ ಮತ್ತು ಸ್ವಚ್ಛತೆಯ ಬಗ್ಗೆ ಹಾಗೂ ಡಾ. ಎಸ್. ವೆಂಕಟೇಶ್ ಮತ್ತು ತಂಡದವರಿಂದ ಮೂರ್ಛೆ ರೋಗ ಕುರಿತು ಸಮಗ್ರ ಮಾಹಿತಿ ಮತ್ತು ಅರಿವು ಎಂಬ ಬೀದಿ ನಾಟಕಗಳನ್ನು ಎರ್ಪಡಿಸಲಾಗಿದೆ.

ಜ.26 ಭಾನುವಾರದಂದು ಬೆಳಗ್ಗೆ 8 ಗಂಟೆಗೆ ಸುತ್ತೂರು ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ 71ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳ ಕಲಾತಂಡಗಳವರು ವರ್ಣರಂಜಿತ ಕಲಾಪ್ರದರ್ಶನಗಳನ್ನು ಜಾತ್ರೆಯ ಮೊದಲಿನಿಂದ ಕೊನೆಯವರೆಗೂ ನೀಡುತ್ತಾರೆ.

ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಸಮಸ್ತ ಭಕ್ತಾದಿಗಳಿಗೆ ಪ್ರತಿನಿತ್ಯವೂ ಬೆಳಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದದ ವ್ಯವಸ್ಥೆ ಇರುತ್ತದೆ. ದೂರದಿಂದ ಬರುವವರಿಗೆ ತಾತ್ಕಾಲಿಕ ಕುಟೀರಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಸಾರಿಗೆ ಸಂಸ್ಥೆಗಳು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಂದ ಸುತ್ತೂರು ಶ್ರೀಕ್ಷೇತ್ರಕ್ಕೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಿವೆ.   ಪ್ರತಿದಿನ ಬೆಳಗ್ಗೆ 6.30 ಕ್ಕೆ ಸುತ್ತೂರು ಜೆಎಸ್‌ಎಸ್ ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ ಪ್ರದರ್ಶನವಿರುತ್ತದೆ.   ಶಿವದೀಕ್ಷೆ ಪಡೆಯಲಿಚ್ಛಿಸುವವರು ಜ.22 ಬುಧವಾರ ಸಂಜೆ ಶ್ರೀಕ್ಷೇತ್ರದಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು.   ಸುತ್ತೂರು ಪ್ರಸಾದನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ಜ.25 ಶನಿವಾರದಂದು ಏರ್ಪಡಿಸಲಾಗಿದೆ.

ಈ ಜಾತ್ರಾ ಮಹೋತ್ಸವದಲ್ಲಿ ಅನೇಕ  ಮಠಾಧೀಶರು, ಧರ್ಮಗುರುಗಳು, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವರುಗಳು, ಸಂಸದರು, ಶಾಸಕರು, ಗಣ್ಯರು, ಸಾಹಿತಿಗಳು ಹಾಗೂ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: