ಮೈಸೂರು

ಅಶೋಕ್ ಪುರಂ ನಿವಾಸಿಗಳಿಗೆ ಮನಪಾ ಅಧಿಕಾರಿಗಳಿಂದ ಶಾಕ್

ಮಂಗಳವಾರ ಬೆಳಗಿನ 5.30ರ ಸಮಯ. ಆಗ ತಾನೇ ಕಣ್ಣುಜ್ಜಿಕೊಳ್ಳುತ್ತ ಕೆಲವರು ಹಾಸಿಗೆ ಬಿಟ್ಟು ಎದ್ದಿದ್ದರೆ ಇನ್ಕೆಲವರು ಮುಂಜಾವಿನ ಕನಸನ್ನು ಕಾಣುತ್ತ ಮಲಗಿದ್ದರು. ಆದರೆ  ಜೆಸಿಬಿಯ ಸದ್ದು ಎಲ್ಲರನ್ನೂ ಹಾಸಿಗೆ ಬಿಟ್ಟೇಳುವಂತೆ ಮಾಡಿತ್ತು. ಇವೆಲ್ಲ ನಡೆದಿದ್ದು ಬಡಕುಟುಂಬಗಳು ವಾಸಿಸುತ್ತಿದ್ದ ಅಶೋಕಪುರಂ ಏರಿಯಾದಲ್ಲಿ.  ಮಂಗಳವಾರ ಬೆಳ್ಳಂಬೆಳಗ್ಗೆ ಜೆಸಿಬಿಯೊಂದಿಗೆ ತೆರಳಿದ ಮಹಾನಗಪಾಲಿಕೆಯ ಅಧಿಕಾರಿಗಳು ಅಲ್ಲಿನ ಜನತೆಗೆ ಶಾಕ್ ನೀಡಿದರು.

ಅಶೋಕಪುರಂನ  13ನೇ ಕ್ರಾಸ್ ನ ನಿವಾಸಿಗಳು ಚರಂಡಿಯನ್ನು ಅತಿಕ್ರಮಿಸಿ ಕಾನೂನುಬಾಹಿರವಾಗಿ ಗುಡಿಸಲು ಕಟ್ಟಿದ್ದಾರೆಂದು ಆರೋಪಿಸಿ ಕಂಪೌಂಡ್ ಗಳನ್ನು, ಸ್ನಾನಗೃಹ ಮತ್ತು ಶೌಚಗೃಹಗಳನ್ನು ಜೆಸಿಬಿ ಮೂಲಕ ನೆಲಸಮಗೊಳಿಸಲಾಗಿದೆ.

15 ಮಂದಿ ಸದಸ್ಯರನ್ನು ಹೊಂದಿದ ಅಭಯ ತಂಡವು ತೆರವು ಕಾರ್ಯಾಚರಣೆಗಿಳಿದಿತ್ತು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಹಾನಗರಪಾಲಿಕೆಯ ತತ್ ಕ್ಷಣದ ನಿರ್ಧಾರ ಅಲ್ಲಿನ ಜನರಿಗೆ ಶಾಕ್ ನೀಡಿದೆ. ಅಷ್ಟೇ ಅಲ್ಲದೇ ಅವರು ಅಸಹಾಯಕತೆಯನ್ನು ವ್ಯಕ್ತಪಡಿಸಿ ದುಃಖವನ್ನು ತೋಡಿಕೊಂಡರು. ಸಿಟಿಟುಡೆಯೊಂದಿಗೆ ಅಲ್ಲಿನ ನಿವಾಸಿ ರಾಜಮ್ಮ ಮಾತನಾಡಿ ಇಲ್ಲಿರುವವರೆಲ್ಲಾ ಬಡವರು.ದುಡಿದು ತಂದು ಅದರಲ್ಲೇ ಜೀವನ ಸಾಗಿಸುತ್ತಿದ್ದೇವೆ. ಈಗ ಇಲ್ಲಿರುವ ಸ್ನಾನ ಮತ್ತು ಶೌಚ ಗೃಹವನ್ನು ನೆಲಸಮಗೊಳಿಸಿದ್ದಾರೆ. ನಮ್ಮ ದೈನಂದಿನ ಜೀವನವನ್ನು ಹೇಗೆ ಕಳೆಯಬೇಕು, ಜನಪ್ರತಿನಿಧಿಗಳು ಸ್ಥಳಕ್ಕಾಗಮಿಸಿ ನಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಅಳಲನ್ನು ತೋಡಿಕೊಂಡರು.

ಯೋಗೇಶ್ ಮಾತನಾಡಿ ಮಹಾನಗರಪಾಲಿಕೆಯಿಂದ ನಮಗೆ ಯಾವುದೇ ನೋಟೀಸ್ ಬಂದಿಲ್ಲ, ನೋಟೀಸ್ ನೀಡದೆ ಬೆಳ್ಳಂಬೆಳಿಗ್ಗೆಯೇ ಬಂದು ತೆರವುಗೊಳಿಸಿದ್ದಾರೆ. ನಮ್ಮ ಕಟ್ಟಡವನ್ನು ಕಳೆದುಕೊಂಡಿದ್ದೇವೆ. ಏನೂ ಉಳಿದಿಲ್ಲ  ಎಂದರು.

ಸಿಟಿಟುಡೆಯೊಂದಿಗೆ ಮನಪಾ ಅಭಿವೃದ್ಧಿ ಅಧಿಕಾರಿ ರಘುಪತಿ ಮಾತನಾಡಿ ಈ ಸ್ಥಳವನ್ನೀಗಾಗಲೇ ಸರ್ವೆ ಮಾಡಲಾಗಿತ್ತು.  ರಸ್ತೆ ಮತ್ತು ಚರಂಡಿ ನಿರ್ಮಾಣಾಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಲಾಗಿದೆ. ಒಂದು ತಿಂಗಳ ಹಿಂದೆಯೇ ಸ್ಥಳೀಯರಿಗೆ ಈ ಕುರಿತು  ಮಾಹಿತಿ ನೀಡಲಾಗಿತ್ತು ಎಂದರು.

ಯಾವಾಗಲೂ ಬಡವ ಮತ್ತು ಶ್ರೀಮಂತರ ನಡುವೆ ಭೇದ-ಭಾವ ನಡೆಸಲಾಗುತ್ತಿದೆ. ಜನಪ್ರತಿನಿಧಿಗಳು ಹತ್ತಿರದಲ್ಲಿಯೇ ನಮಗೆ ಶೌಚಾಲಯ ಮತ್ತು ಸ್ನಾನಗೃಹ ನಿರ್ಮಿಸಿಕೊಡಬೇಕು. ಆದರೆ ಜನಪ್ರತಿನಿಧಿಗಳು ತಾವು ಕೊಟ್ಟ ಮಾತನ್ನು ನಡೆಸಿಕೊಡುವಲ್ಲಿ ವಿಫಲರಾಗುತ್ತಿದ್ದಾರೆ.  ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕಾಳಜಿ ತೋರಿಸುತ್ತಾರೆ ಎನ್ನುವುದು ಸ್ಥಳೀಯರ ಆರೋಪ.

Leave a Reply

comments

Tags

Related Articles

error: