ಪ್ರಮುಖ ಸುದ್ದಿ

58 ಸಾವಿರ ಬೂತ್ ಮಟ್ಟದಲ್ಲಿ ಬಿಜೆಪಿಯಿಂದ ಜನಜಾಗೃತಿ ಕಾರ್ಯಕ್ರಮ

ರಾಜ್ಯ( ಮಡಿಕೇರಿ) ಜ.18 :- ಪೌರತ್ವ ಕಾಯ್ದೆ ಬಗ್ಗೆ ಬಿಜೆಪಿ ವತಿಯಿಂದ ರಾಜ್ಯ ವ್ಯಾಪಿ ಜ.19 ಮತ್ತು 20 ರಂದು ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಜ.26 ರಂದು ರಾಜ್ಯದಲ್ಲಿರುವ 58 ಸಾವಿರ ಬೂತ್ ಮಟ್ಟದಲ್ಲಿ ರಾಷ್ಟ್ರ ಧ್ವಜಾರೋಹಣದ ನಂತರ ಕಾಯ್ದೆ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.19 ಮತ್ತು 20 ರಂದು ರಾಜ್ಯದ ಎಲ್ಲಾ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಮನೆಮನೆಗಳಿಗೆ ತೆರಳಿ ಪೌರತ್ವ ಕಾಯ್ದೆ ಕುರಿತು ಮತ್ತೊಮ್ಮೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದರು.
ಜ.26 ರಂದು ಎಲ್ಲಾ ಬೂತ್ ಮಟ್ಟದ ಅಧ್ಯಕ್ಷರು ರಾಷ್ಟ್ರ ಧ್ವಜವನ್ನು ಹಾರಿಸಿದ ನಂತರ ಕಾಯ್ದೆಯನ್ನು ವಿವರಿಸಲಿದ್ದಾರೆ. ಅಲ್ಲದೆ, ‘ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು’ ಪುಸ್ತಕವನ್ನು ವಾಚಿಸಲಿದ್ದಾರೆ ಎಂದು ರವಿ ಕುಮಾರ್ ತಿಳಿಸಿದರು.
ಕಾಂಗ್ರೆಸ್ ಪಕ್ಷ ಕಾಯ್ದೆ ಕುರಿತು ಅಪಪ್ರಚಾರ ಮಾಡುವ ಮೂಲಕ ದೇಶಕ್ಕೆ ಮೋಸ ಮಾಡುತ್ತಿದೆಯೆಂದು ಅವರು ಇದೇ ಸಂದರ್ಭ ಆರೋಪಿಸಿದರು. ಎನ್‍ಆರ್‍ಸಿ ಬಗ್ಗೆ ಚರ್ಚೆಯೂ ಆಗಿಲ್ಲ, ಅಧಿವೇಶನದಲ್ಲಿ ಅಂಗೀಕಾರವೂ ಆಗಿಲ್ಲ. ವಿನಾಕಾರಣ ಈ ಬಗ್ಗೆಯೂ ಗೊಂದಲ ಸೃಷ್ಟಿಸಲಾಗುತ್ತಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದ ಹಿತ ದೃಷ್ಟಿಯಿಂದ ಜಾರಿಗೆ ತಂದಿರುವ ಕಾಯ್ದೆಗಳ ವಿರುದ್ಧ ನಡೆಯುವ ಹೋರಾಟಗಳನ್ನು ಮುಸಲ್ಮಾನರು ತಿರಸ್ಕರಿಸಬೇಕೆಂದು ಮನವಿ ಮಾಡಿದರು. ಸಧ್ಯದಲ್ಲೆ ರಾಜ್ಯ ಸಂಪುಟ ವಿಸ್ತರಣೆಯಾಗಲಿದೆ ಎಂದ ರವಿ ಕುಮಾರ್, ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಸ್ಪಷ್ಟಪಡಿಸಿದರು.
ಬಿಜೆಪಿ ಒಂದು ರಾಷ್ಟ್ರೀಯ ಮಟ್ಟದ ಶಿಸ್ತಿನ ಪಕ್ಷವಾಗಿದ್ದು, ಎಲ್ಲವೂ ಶಿಸ್ತಿನಿಂದಲೆ ನಡೆಯಬೇಕಾಗಿದೆ. ಗೃಹ ಸಚಿವ ಅಮಿತ್ ಷಾ ಅವರು ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭ ಸಂಪುಟ ವಿಸ್ತರಣೆಯ ಕುರಿತು ಮುಖ್ಯಮಂತ್ರಿಗಳು ಚರ್ಚಿಸಲಿದ್ದಾರೆ ಎಂದು ರವಿ ಕುಮಾರ್ ತಿಳಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: