
ಮೈಸೂರು
ಫಿಟ್ ಇಂಡಿಯಾ ಅಭಿಯಾನದಡಿ ಸೈಕ್ಲೋಥಾನ್/ಮ್ಯಾರಥಾನ್ ಗೆ ಚಾಲನೆ
ಮೈಸೂರು, ಜ.18:- ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೇಹರು ಯುವ ಕೇಂದ್ರ ಮೈಸೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೈಸೂರು, ರಾಷ್ಟ್ರೀಯ ಸೇವಾ ಯೋಜನೆ ಮೈಸೂರು ವಿಶ್ವವಿದ್ಯಾನಿಲಯ ಮೈಸೂರು ಇವರ ಸಹಯೋಗದಲ್ಲಿ ದಿವ್ಯಚೇತನ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಅಂಗವಾಗಿ ಫಿಟ್ ಇಂಡಿಯಾ ಅಭಿಯಾನದಡಿ ಸೈಕ್ಲೋಥಾನ್/ಮ್ಯಾರಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ ದೇಹವೇ ದೇಗುಲ. ದೇಹವನ್ನು ಚೆನ್ನಾಗಿಟ್ಟುಕೊಂಡರೆ ಅದು ನಿಮ್ಮನ್ನು ಚೆನ್ನಾಗಿಡತ್ತೆ. ವಚನಕಾರರು ದೇಹವೇ ದೇಗುಲ ಅಂತ ಹೇಳಿದ್ದರು. ಒತ್ತಡದ ಬದುಕಿನಲ್ಲಿ ದೇಹವನ್ನು ಚೆನ್ನಾಗಿಟ್ಟುಕೊಳ್ಳಲಿಕ್ಕೆ ಆಗ್ತಿಲ್ಲ. ಪ್ರಧಾನಿಗಳು ಫಿಟ್ ಇಂಡಿಯಾವನ್ನು ಆಯೋಜಿಸಿದರು. ದೇಹ ಆರೋಗ್ಯವಾಗಿದ್ದರೆ ಮಾತೃ ಸದೃಢ ಮನಸ್ಸು ಇರಲು ಸಾಧ್ಯ. ನಮ್ಮಲ್ಲಿ ಸಕಾರಾತ್ಮಕ ಶಕ್ತಿ ಹುಟ್ಟಿಕೊಳ್ಳತ್ತೆ ಎಂದರು.
ಎನ್.ವೈ.ಕೆ.ಎಸ್ ಜಂಟಿ ನಿರ್ದೇಶಕ ಯು.ಪಿ.ಸಿಂಗ್, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ದಿವ್ಯಶ್ರೀ, ಎನ್ ಎ ಎಫ್ ನಿರ್ದೇಶಕರಾದ ರುಕ್ಮಿಣಿ ಚಂದ್ರನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಕೆ, ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಚಾಮುಂಡಿ ವಿಹಾರ್ ಕ್ರೀಡಾಂಗಣದಿಂದ ಆರಂಭಗೊಂಡು ಕ್ರೀಡಾಂಗಣದ ಉತ್ತರ ದ್ವಾರದಿಂದ ನಿರ್ಗಮಿಸಿ, ಎಸ್ಪಿ ಕಚೇರಿ ವೃತ್ತ, ಹಾರ್ಡಿಂಗ್ ವೃತ್ತ, ಕೆಆರ್ ವೃತ್ತ, ಸಯ್ಯಾಜಿ ರಾವ್ ರಸ್ತೆ, ಕೆಆರ್ ಆಸ್ಪತ್ರೆ , ಇರ್ವಿನ್ ರಸ್ತೆ, ಸಬರ್ಬನ್ ಬಸ್ ನಿಲ್ದಾಣ, ಗವರ್ನ್ಮೆಂಟ್ ಹೌಸ್, ಜೆಪಿ ಫಾರ್ಚೂನ್ ಹೋಟೆಲ್ ಮೂಲಕ ಸಾಗಿ ಎಸ್ಪಿ ಕಚೇರಿ ವೃತ್ತ, ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸಮಾಪ್ತಿಗೊಂಡಿತು. (ಕೆ.ಎಸ್,ಎಸ್.ಎಚ್)