ಮೈಸೂರು

ಬಿಜೆಪಿ ಒಳಜಗಳದಿಂದ ರಾಜ್ಯದ ಅಭಿವೃದ್ಧಿ ಬಡವಾಗಿದೆ : ಮಾಜಿ ಸಚಿವ ಕೃಷ್ಣಭೈರೇ ಗೌಡ ಆರೋಪ

ಮೈಸೂರು,ಜ.18:- ಗಂಡಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಥರ ಬಿಜೆಪಿ ಒಳಜಗಳದಿಂದ ರಾಜ್ಯದ ಅಭಿವೃದ್ಧಿ ಬಡವಾಗಿದೆ ಎಂದು ಮಾಜಿ ಸಚಿವ ಕೃಷ್ಣಭೈರೇ ಗೌಡ ಆರೋಪಿಸಿದ್ದಾರೆ.

ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಆರು ತಿಂಗಳಾದರೂ ಬಿಜೆಪಿ ಸಂಪೂರ್ಣ ಸಂಪುಟ ರಚಿಸಲು ವಿಫಲವಾಗಿದೆ. ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗಿಂತ ಸಚಿವ ಸಂಪುಟ ವಿಸ್ತರಣೆ ಮುಖ್ಯವಾದದ್ದು, ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಥರ. ಬಿಜೆಪಿ ಒಳಜಗಳದಿಂದ ರಾಜ್ಯದ ಅಭಿವೃದ್ಧಿ ಬಡವಾಗಿದೆ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆ ವಿಳಂಬವಾಗಿಲ್ಲ. ಕೆಪಿಸಿಸಿ ಆಗಲಿ, ಎಐಸಿಸಿ ಆಗಲಿ ನಿನ್ನೆ ಅಧ್ಯಕ್ಷರ ಆಯ್ಕೆ ಮಾಡುತ್ತೇವೆಂದು ಹೇಳಿರಲಿಲ್ಲ. ಅಧ್ಯಕ್ಷರ ಅವಧಿ ಇನ್ನು ಮೂರು ವರ್ಷ ಸಮಯ ಇದೆ. ಅಷ್ಟರೊಳಗೆ ನಮ್ಮ ಪಕ್ಷಕ್ಕೆ ಅಧ್ಯಕ್ಷರ ಆಯ್ಕೆ ಮಾಡುತ್ತೇವೆ. ಆದ್ರೆ ಆರು ತಿಂಗಳಾದರೂ ಬಿಜೆಪಿ ಸರ್ಕಾರ ಪೂರ್ಣ ಸಂಪುಟ ರಚಿಸಿಲ್ಲ. ನೆರೆ, ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಬಿಜೆಪಿಯವರು ಉತ್ತರ ಕೊಡಲಿ‌. ಬಿಜೆಪಿಯಲ್ಲಿ ಎಲ್ಲರೂ ಒತ್ತಡದಲ್ಲಿ ಇದ್ದಾರೆ. ಸಿಎಂ ಆದಿಯಾಗಿ ಎಲ್ಲರೂ ಒತ್ತಡದಲ್ಲಿ ರಾಜಕಾರಣ ಮಾಡ್ತಿದ್ದಾರೆ. ಸಿಎಂ ಹಾಗೂ ವರಿಷ್ಠರ ನಡುವೆ ಸಮನ್ವಯತೆ ಇಲ್ಲ. ರಾಜ್ಯದಲ್ಲೂ ಸಿಎಂ ಹಾಗೂ ನಾಯಕರ ನಡುವೆ ಸಮನ್ವಯತೆ ಇಲ್ಲ. ಇವೆಲ್ಲದರ ಪರಿಣಾಮ ರಾಜ್ಯದ ಅಭಿವೃದ್ಧಿ ಮೇಲೆ ಬಿದ್ದಿದೆ. ರಾಜ್ಯದಲ್ಲಿ ಒಂದೇ ಒಂದು ಕೆಲಸ ಆಗ್ತಾ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: