ಮೈಸೂರು

ನಿಯಮ ಉಲ್ಲಂಘನೆ: ಯುವರಾಜ ಕಾಲೇಜು ಮಂಡಳಿ ಇಂದು ಕೋರ್ಟ್‍ಗೆ ಹಾಜರು

ಯುವರಾಜ ಕಾಲೇಜಿನ ಐವರು ಉಪನ್ಯಾಸಕರು ಕಾಲೇಜಿನ ವಿರುದ್ಧ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸೆ.27ರಂದು ವಿಚಾರಣೆಗೆ ಹಾಜರಾಗುವಂತೆ ಮುಖ್ಯಸ್ಥರಿಗೆ ಕೋರ್ಟ್ ನೋಟಿಸ್ ನೀಡಿದೆ.

ಸಹಾಯಕ ಉಪನ್ಯಾಸಕರನ್ನು ನೇಮಕ ಮಾಡುವ ಮೂಲಕ ಕಾಲೇಜು ಯುಜಿಸಿ ಮಾರ್ಗಸೂಚಿ, ಮೀಸಲಾತಿ ನಿಯಮ ಮತ್ತು ಕರ್ನಾಟಕ ಸರಕಾರ ವಿಶ್ವವಿದ್ಯಾನಿಲಯ ಕಾಯಿದೆಯನ್ನು ಉಲ್ಲಂಘಿಸುತ್ತಿದೆ ಎಂದು ತಾತ್ಕಾಲಿಕ ಉಪನ್ಯಾಸಕರಾದ ಬಿ.ಮನೋಹರ್, ಎಮ್.ಶೋಭಾ, ಜಿ.ಎನ್. ಪೂರ್ಣಿಮಾ, ಡಿ.ಎಮ್.ಮಂಜುನಾಥ್ ಮತ್ತು ಬಿ. ರಕ್ಷಿತ್ ಆರೋಪಿಸಿದ್ದರು.

ಸಹಾಯಕ ಉಪನ್ಯಾಸಕರ ನೇಮಕವನ್ನು ತಡೆಹಿಡಿಯುವಂತೆ ರಾಜ್ಯ ಸರಕಾರ ಆದೇಶಿಸಿದ್ದರೂ, ಯುವರಾಜ ಕಾಲೇಜು ಅದನ್ನು ಉಲ್ಲಂಘಿಸಿ ನೇಮಕ ಪ್ರಕ್ರಿಯೆಯನ್ನು ಮುಂದುವರಿಸಿತ್ತು ಎನ್ನಲಾಗಿದೆ.

ನೇಮಕ ಪ್ರಕ್ರಿಯೆಯನ್ನು ನಿಲ್ಲಿಸಿ, ಈ ಪ್ರಕರಣದ ಬಗ್ಗೆ ಮೂರು ದಿನದೊಳಗೆ ವಿವರಾತ್ಮಕ ವರದಿ ನೀಡುವಂತೆ ರಿಜಿಸ್ಟ್ರಾರ್‍ಗೆ ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಆರ್. ಸೋಮಶೇಖರ್ ಆದೇಶಿದ್ದರು. ಆದರೆ, ಈ ಆದೇಶವನ್ನು ಕೂಡ ಉಲ್ಲಂಘಿಸಿ ನೇಮಕ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಸೆ.25ರಂದು ಸಂದರ್ಶನ ನಡೆಸಲಾಗಿದೆ ಎನ್ನಲಾಗಿದೆ.

ಯುವರಾಜ ಕಾಲೇಜು 48 ಸಹಾಯಕ ಪ್ರೊಫೆಸರ್ ಹುದ್ದೆಗಳಿಗಾಗಿ ಜುಲೈ 22ರಂದು ಅರ್ಜಿ ಆಹ್ವಾನಿಸಿದ್ದು ಅಂತಿಮ ಹಂತಕ್ಕೆ ಆಯ್ಕೆಯಾದ ಸುಮಾರು 700 ಅಭ್ಯರ್ಥಿಗಳಿಗೆ ಸೆ.21ರಿಂದ ಅ.8ರವರೆಗೆ ಸಂದರ್ಶನ ಏರ್ಪಡಿಸಲಾಗಿತ್ತು. ಪ್ರಥಮ ಹಂತದ ಆಯ್ಕೆ ಪ್ರಕ್ರಿಯೆ ಭಾನುವಾರವೂ ಸೇರಿ ಸೆ.21ರಿಂದ 25ರವರೆಗೆ ನಡೆದಿತ್ತು.

 

Leave a Reply

comments

Tags

Related Articles

error: