ಮೈಸೂರು

ಈ ದೇಶದ ಮೂಲ ನಿವಾಸಿಗಳನ್ನು ಹೊರಹಾಕಲು ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ತಂದಿದೆ : ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು, ಜ.21;-  ಈ ದೇಶದ ಮೂಲ ನಿವಾಸಿಗಳನ್ನು ಹೊರಹಾಕಲು ಪೌರತ್ವ ತಿದ್ದುಪಡಿ ಕಾಯಿದೆಯನ್ನು ಕೇಂದ್ರ ಸರಕಾರವು ಜಾರಿಗೆ ತಂದಿದ್ದು, ಕಾಂಗ್ರೆಸ್‌ ಕಾರ್ಯಕರ್ತರು ಇದನ್ನು ಗಟ್ಟಿಯಾಗಿ ಹೇಳಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.

ಮೈಸೂರು ಜಿಲ್ಲಾಕಾಂಗ್ರೆಸ್‌ ಸಮಿತಿ ಹುಣಸೂರು ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಜಯಸಾಧಿಸಿದ ಹಿನ್ನೆಲೆಯಲ್ಲಿ ಚುನಾವಣಾ ಉಸ್ತುವಾರಿ ವಹಿಸಿದ್ದ ಪಕ್ಷದ ಮುಖಂಡರಿಗೆ ನಿನ್ನೆ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಕೃತಜ್ಞತಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಬಿಜೆಪಿಯವರು ಸುಳ್ಳನ್ನೇ ಅಗ್ರೆಸ್ಸಿವ್‌ ಆಗಿ ಹೇಳಲು ಹೊರಟಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಕೆಟ್ಟ ಆರ್ಥಿಕ ನೀತಿ ಅನುಸರಿಸುತ್ತಿದ್ದಾರೆ. ದೇಶ ಅಧೋಗತಿಯತ್ತ ಸಾಗುತ್ತಿದೆ. ಇದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಸಿಎಎ ಜಾರಿಗೆ ತಂದಿದ್ದಾರೆ. ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿದ್ದಕ್ಕೆ ನಾವೆಲ್ಲಾ ಉಳಿದುಕೊಂಡಿದ್ದೇವೆ. ಬಿಜೆಪಿಯವರಲ್ಲೇ ಯಾರಾದರೂ ಆಗಿದ್ದರೆ ನೇರವಾಗಿ ಮನುಸ್ಮೃತಿ ಜಾರಿಗೆ ತರುತ್ತಿದ್ದರು ಎಂದು   ಆರೋಪಿಸಿದರು.

ಬಿಜೆಪಿಯವರು ಸಾಫ್ಟ್‌ ಹಿಂದುತ್ವ, ಹಾರ್ಡ್‌ ಹಿಂದುತ್ವ ಅಂತೆಲ್ಲಾ ಹೇಳುತ್ತಿದ್ದಾರೆ. ನಮ್ಮಲ್ಲೂ ಕೆಲವರು ಬಿಜೆಪಿಯವರು ಹೇಳುತ್ತಿರುವುದು ಸರಿ ಇದೆ ಅಂತ ಗುಸು ಗುಸು ಅಂತಿದ್ದಾರೆ. ನಿಮಗೆ ಸ್ಪಷ್ಟತೆ ಇರಬೇಕು ಎಂದು ಸಿದ್ದರಾಮಯ್ಯ ಕಾರ್ಯಕರ್ತರಿಗೆ ಹೇಳಿದರು.

ಹುಣಸೂರು ಶಾಸಕ ಎಚ್‌.ಪಿ. ಮಂಜುನಾಥ್‌ ಮಾತನಾಡಿ ಹುಣಸೂರಿನ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್‌ ಜಯ ಸಾಧಿಸಿದೆ. ನಮ್ಮ ಒಗ್ಗಟ್ಟಿನ ಕೆಲಸ ಗೆಲುವಿಗೆ ಕಾರಣವಾಗಿದೆ. ಗೆದ್ದ ಮೇಲೆ ನನಗೆ ಭಯ ಆಗುತ್ತಿದೆ. ಜನರ ನಂಬಿಕೆಯನ್ನು ಹುಸಿಗೊಳಿಸದೆ ಕೆಲಸ ಮಾಡಬೇಕಿದೆ.   ಹುಣಸೂರಿನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದೇನೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 2,600 ಕೋಟಿ ರೂ. ಅನುದಾನ ನೀಡಿದ್ದರು. ಈಗ ಪರಿಸ್ಥಿತಿ ಉಲ್ಟಾ ಆಗಿದೆ. ನಮ್ಮ ಸರಕಾರವಿಲ್ಲ. ಹೇಗೆ ಕೆಲಸ ಮಾಡಬೇಕು ಅಂತ ಗೊತ್ತಾಗುತ್ತಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಿತ್ತಿದ ಬೀಜ ಈಗ ಫಲ ನೀಡುತ್ತಿವೆ. ಈಗ ವಿಧಾನಸಭೆ ಚುನಾವಣೆ ಬಂದರೆ ಖಂಡಿತ ಕಾಂಗ್ರೆಸ್‌ ಬಹುಮತ ಗಳಿಸಲಿದೆ ಎಂದು  ಹೇಳಿದರು.

ಮಾಜಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಮಾತನಾಡಿ  ಹುಣಸೂರಿನಲ್ಲಿ ಕಾಂಗ್ರೆಸ್ ಗೆಲುವಿಗೆ ಎಲ್ಲರೂ ದುಡಿದಿದ್ದಾರೆ. ಎಲ್ಲರ ಪರಿಶ್ರಮದಿಂದ 39ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇವೆ. ಜಾತಿ ಬೆಂಬಲವಿಲ್ಲದೇ ಸಿದ್ದರಾಮಯ್ಯನವರ ಅಭಿವೃದ್ಧಿ ಕೆಲಸಗಳಿಂದ ಕ್ಷೇತ್ರ ನಮ್ಮದಾಗಿದೆ. ಮಂಜುನಾಥ್ ಅವರು ಕ್ಷೇತ್ರದಲ್ಲಿ ಮಾಡಿರುವ ಕೆಲಸ ಗೆಲವಿಗೆ ಕಾರಣವಾಗಿದೆ. ವಿಶ್ವನಾಥ್ ಗೆ ಜಾತಿ ಬೆಂಬಲವಿದ್ರೂ ಕೇವಲ 300ಮತಗಳಿರುವ ಸಮುದಾಯದ ಮಂಜುನಾಥ್ ಗೆದ್ದಿದ್ದಾರೆ. ಜನ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದಿದ್ದಾರೆ. ಜಿ.ಪಂ ಹಾಗೂ ತಾ.ಪಂ ಅಧ್ಯಕ್ಷರು ಹಾಗೂ ಸದಸ್ಯರು ಕಡ್ಲೆಪುರಿ ತಿನ್ಕೊಂಡು ಕೆಲಸ ಮಾಡಿದ್ದಾರೆ. ಈ ರೀತಿಯ ಪಕ್ಷನಿಷ್ಠೆ ಇದ್ರೆ ಗೆಲುವು ಸುಲಭ ಎಂದರು.

ಇದೇ ವೇಳೆ ಹುಣಸೂರಿನ ನೂತನ ಶಾಸಕ ಎಚ್‌.ಪಿ. ಮಂಜುನಾಥ್‌ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಯು.ಟಿ. ಖಾದರ್‌, ಮಾಜಿ ಸಂಸದ ಆರ್‌. ಧ್ರುವನಾರಾಯಣ್‌, ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ಶಾಸಕ ಅನಿಲ್‌ ಚಿಕ್ಕಮಾದು, ಮೈಸೂರು ಜಿಲ್ಲಾಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ನಗರಾಧ್ಯಕ್ಷ ಆರ್‌. ಮೂರ್ತಿ ಮತ್ತಿತರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: