ಪ್ರಮುಖ ಸುದ್ದಿಮೈಸೂರು

ನಾನು ಹಿಂದೂ ಟೆರರಿಸಂ ಎನ್ನುವ ಪದವನ್ನೇ ಕೇಳಿಲ್ಲ : ಡಿಸಿಎಂ ಗೋವಿಂದ ಕಾರಜೋಳ; ಸಜೀವ ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಲಿ

ಮೈಸೂರು,ಜ.21:- ನಾನು ಹಿಂದೂ ಟೆರರಿಸಂ ಎನ್ನುವ ಪದವನ್ನೇ ಕೇಳಿಲ್ಲ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಲಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಗೋವಿಂದ ಎಂ.ಕಾರಜೋಳ ಹಿಂದೂಗಳಲ್ಲಿ ಯಾರು ಟೆರರಿಸ್ಟ್ ಇಲ್ಲ. ಹಿಂದೂ ಟೆರರಿಸಂ ಅನ್ನುವ ಪದವನ್ನೇ ನಾನು ಕೇಳಿಲ್ಲ. ಟೆರರಿಸ್ಟ್ ಎಂದರೆ ಪಾಕಿಸ್ತಾನದಿಂದ ಬಂದವರು ಅಂತ ಅಂದುಕೊಂಡಿದ್ದೇನೆ ಎಂದರು.

ಬಾಂಬ್ ಪತ್ತೆ ಪ್ರಕರಣದ ಸೂಕ್ತ ತನಿಖೆಯಾಗಲಿ. ತನಿಖಾ‌ ಹಂತದಲ್ಲಿ ಒಬ್ಬಬ್ಬರು ಒಂದೊಂದು ರೀತಿ ಹೇಳಿಕೆ ನೀಡುವುದು ಬೇಡ‌. ಇಡೀ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ನಿನ್ನೆ ನಾನು ದೆಹಲಿಯಲ್ಲಿ ಇದ್ದೆ. ಇಂದು ಮೈಸೂರಿಗೆ ಬಂದಿದ್ದೇನೆ. ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು   ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆಯಾದರೇ ಬಿಜೆಪಿ ಸರ್ಕಾರದಲ್ಲಿ ಸ್ಫೋಟವಾಗುತ್ತದೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ  ಅವರು, ಸಚಿವ ಸಂಪುಟ ವಿಸ್ತರಣೆಯಾದರೆ ಜಗತ್ತು ಪ್ರಳಯ ಆಗಿ ಬಿಡುವುದಿಲ್ಲ. ಸಚಿವ ಸಂಪುಟ ವಿಸ್ತರಣೆ ಆಗುತ್ತೆ. ಆದರೆ ಸಿದ್ದರಾಮಯ್ಯ ಹೇಳುವಂತೆ ಸ್ಫೋಟವೂ ಆಗುವುದಿಲ್ಲ, ಏನೂ ಆಗುವುದಿಲ್ಲ. ಸಿದ್ದರಾಮಯ್ಯ ಅವರು ಭ್ರಮೆಯಲ್ಲಿ ಇದ್ದಾರೆ. ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬುದನ್ನು ನಮ್ಮ‌ ನಾಯಕರು ನಿರ್ಧಾರ ಮಾಡುತ್ತಾರೆ. ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಬೇಕು ಎಂಬುದು ನನ್ನ ಅಭಿಪ್ರಾಯ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ, ಭಿನ್ನಾಭಿಪ್ರಾಯವೂ ಇಲ್ಲ ಎಂದು ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ,  ವಿರೋಧ ಪಕ್ಷಗಳು ಸಿಎಎಯನ್ನು ಯಾಕೆ ಇಷ್ಟು ವಿರೋಧ ಮಾಡುತ್ತಿವೆ ಗೊತ್ತಾಗುತ್ತಿಲ್ಲ.  ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಕಾಲದಲ್ಲೂ ಪೌರತ್ವ ಕಾಯ್ದೆಗೆ ತಿದ್ದುಪಡಿ ಆಗಿದೆ. ಆಗೆಲ್ಲಾ ವಿರೋಧ ಮಾಡದೇ ಇರುವ ಕಾಂಗ್ರೆಸ್‌ನವರು ಈಗ ಯಾಕೆ ಇಷ್ಟೊಂದು ಪ್ರತಿರೋಧ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಾಂಗ್ಲಾದೇಶ, ಪಾಕಿಸ್ತಾನ, ಆಫ್ಘಾನಿಸ್ತಾನ ದೇಶಗಳಿಂದ ಬಂದವರು ಶೋಷಿತರು, ಅತ್ಯಾಚಾರಕ್ಕೆ ಒಳಗಾದವರಿಗೆ ಪೌರತ್ವ ನೀಡುತ್ತಿದ್ದೇವೆ. ಜತೆಗೆ ಅಕ್ರಮ ವಲಸಿಗರನ್ನು ದೇಶದಿಂದ ಹೊರಕ್ಕೆ ಕಳುಹಿಸುತ್ತಿದ್ದೇವೆ. ವಲಸಿಗರು ಇಲ್ಲಿ ಇರುವುದರಿಂದ ದೇಶಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ಇಲ್ಲಿ ನೆಲೆಸಿರುವ ಯಾರೊಬ್ಬರಿಗೂ ತೊಂದರೆ ಕೊಡುವುದಿಲ್ಲ ಎಂದು ಡಿಸಿಎಂ ಗೋವಿಂದ ಎಂ.ಕಾರಜೋಳ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: