ಪ್ರಮುಖ ಸುದ್ದಿ

ಕುಷ್ಠ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ : ಜಿ.ಪಂ ಸಿಇಒ ಲಕ್ಷ್ಮೀಪ್ರಿಯ ಸಲಹೆ

ರಾಜ್ಯ( ಮಡಿಕೇರಿ) ಜ.22:- ಕುಷ್ಠರೋಗದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯ ಅವರು ತಿಳಿಸಿದರು.
ನಗರದ ಜಿ.ಪಂ.ಕಚೇರಿ ಸಭಾಂಗಣದಲ್ಲಿ ನಡೆದ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮ ಅನುಷ್ಠಾನ ಬಗ್ಗೆ ನಡೆದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ, ಮಾಧ್ಯಮಗಳಲ್ಲಿ, ಕುಷ್ಠ ರೋಗದ ಕುರಿತು ಹೆಚ್ಚಿನ ಪ್ರಚಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಕುಷ್ಠ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಹಾಗೂ ಸ್ಪರ್ಶ್ ಆಂದೋಲನದ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಿ ಜಿಲ್ಲೆಯಾದ್ಯಂತ ಕಾರ್ಯಕ್ರಮ ನಡೆಸಿ ಯಶಸ್ವಿಗೊಳಿಸುವಂತೆ ಜಿ.ಪಂ.ಸಿಇಒ ಅವರು ಹೇಳಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ಜನವರಿ, 30 ರಿಂದ ಫೆಬ್ರವರಿ, 13 ರ ತನಕ 15 ದಿನಗಳ ಕಾಲ ಜಿಲ್ಲೆಯಾದ್ಯಂತ ಸ್ಪರ್ಶ್‍ಕುಷ್ಠ ರೋಗ ಅರಿವು ಆಂದೋಲನ ನಡೆಯಲಿದ್ದು, ಗ್ರಾ.ಪಂ. ಗ್ರಾಮ ಸಭೆಗಳಲ್ಲಿ, ಪ್ರತೀ ಗ್ರಾಮಗಳಲ್ಲಿ, ನಗರ ಪ್ರದೇಶಗಳಲ್ಲಿ ಕುಷ್ಠ ರೋಗದ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 3 ಕುಷ್ಠರೋಗ ಪ್ರಕರಣಗಳು ಪತ್ತೆಯಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ 2, ಸೋಮವಾರಪೇಟೆ ತಾಲ್ಲೂಕಿನಲ್ಲಿ 1 ಪ್ರಕರಣ ಪತ್ತೆಯಾಗಿದ್ದು, ಇವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಸ್ಪರ್ಶ್ ಕುಷ್ಠ ರೋಗ ಅರಿವು ಆಂದೋಲನದ ಯಶಸ್ವಿಗಾಗಿ ರೇಡಿಯೋ, ದಿನಪತ್ರಿಕೆಗಳಲ್ಲಿ ಮತ್ತು ದೂರದರ್ಶನದ ಮೂಲಕ ಕಾರ್ಯಕ್ರಮ ನಡೆಸಿ ಅರಿವು ಮೂಡಿಸಲಾಗುತ್ತಿದೆ. ಆಶಾ ಕಾರ್ಯಕರ್ತರಿಗೆ ವ್ಯಾಪಕ ಪ್ರಚಾರ ಕೈಗೊಳ್ಳಲು ಸೂಚಿಸಲಾಗಿದ್ದು, ಕುಷ್ಠ ರೋಗದಿಂದ ಗುಣಮುಕ್ತರಾದವರನ್ನು ಕರೆತಂದು, ಅಂತವರ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುವುದು ಎಂದು ಡಾ.ಆನಂದ್ ಅವರು ತಿಳಿಸಿದರು.
ಸ್ಪರ್ಶ್ ಕುಷ್ಠ ರೋಗ ಅರಿವು ಆಂದೋಲನದ 2020ರ ಬಿತ್ತಿ ಪತ್ರಗಳನ್ನು ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯ ಅವರು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಜಿ.ಪಂ.ಉಪಕಾರ್ಯದರ್ಶಿ ಗುಡೂರು ಭೀಮಸೇನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮೀ ಬಾಯಿ, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್ ಇತರರು ಹಾಜರಿದ್ದರು.
(ಕೆಸಿಐ,ಎಸ್.ಎಚ್)

Leave a Reply

comments

Related Articles

error: