ಮೈಸೂರು

ಮೈಸೂರಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮೊಮ್ಮಗ..!

ಹೆಸರಾಂತ ಶಿಕ್ಷಣ ತಜ್ಞ, ಮಾಜಿ ಉಪರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮೊಮ್ಮಗ ಮೈಸೂರಿಗೆ ಭೇಟಿ ನೀಡಿದ್ದರು. ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಇವರು  ಮೈಸೂರಿಗೆ ಬಂದ ವೇಳೆ‌ ಅವರ ತಾತ ಮೈಸೂರಿನಲ್ಲಿ ನೆಲೆಸಿದ್ದ ಸ್ಥಳಗಳಿಗೆ ಭೇಟಿ ನೀಡಿ ಸಂತಸ ಪಟ್ಟಿದ್ದಾರೆ. ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಕೇಶವ್ ದೇಸಿರಾಜು ಮೈಸೂರಿನಲ್ಲಿ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರು ತಂಗಿದ್ದ ಸ್ಥಳಗಳು, ಸಮಯ ಕಳೆದ ಜಾಗಗಳಿಗೆ ಭೇಟಿ ನೀಡಿದ್ದಾರೆ. ರಾಧಕೃಷ್ಣನ್ ಅವರಿಗೆ 5 ಮಂದಿ ಹೆಣ್ಣು ಮಕ್ಕಳು. ಈ ಪೈಕಿ ಕಡೆಯ ಮಗಳಾದ ಶಕುಂತಲಾ ಅವರ ಮಗನೇ ಕೇಶವ್ ದೇಸಿರಾಜು.

ತಾತನ ಕುರಿತ ಪುಸ್ತಕ ಮೊಮ್ಮಗನ ಕೈಗೆ…

ಮಾನಸ ಗಂಗೋತ್ರಿ ಕ್ಯಾಂಪಸ್ ನಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿನ ಸಮಿತಿ ಸಭೆಯೊಂದರಲ್ಲಿ ಭಾಗವಹಿಸುವ ಸಲುವಾಗಿ ಕೇಶವ್ ದೇಸಿರಾಜು ಬುಧವಾರ ಚೆನ್ನೈನಿಂದ ಮೈಸೂರಿಗೆ ಆಗಮಿಸಿದ್ದರು. ಸಭೆ ಬಳಿಕ ತಾತ ಮೈಸೂರಿನಲ್ಲಿ ವಾಸವಿದ್ದ ಸ್ಥಳಗಳಿಗೆ ಭೇಟಿ ನೀಡಿದರು. ಈ ವೇಳೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೀರ್ತಿಕುಮಾರ್ ಜೊತೆಯಾದರಲ್ಲದೇ ತಾತನ  ವಾಸವಿದ್ದ ಸ್ಥಳಗಳ ಭೇಟಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿದರು.

ಈ ವೇಳೆ‌ ಮೊದಲಿಗೆ ಕುಕ್ಕರಹಳ್ಳಿ ಕೆರೆ ಸಮೀಪದ ಡಾ.ಎಸ್.ರಾಧಕೃಷ್ಣನ್ ಪುನರುಜ್ಜೀವಿತಾ ಪಾರಂಪರಿಕ ಕಟ್ಟಡಕ್ಕೆ ಭೇಟಿ ನೀಡಿ ತಾತನ ಅಪರೂಪದ ಭಾವಚಿತ್ರಗಳನ್ನು ಕಂಡು ಸಂತಸಪಟ್ಟರು. ಈ ವೇಳೆ ಕೇಂದ್ರದ ಸಂಚಾಲಕ ಹಾಗೂ ಮೈಸೂರು ವಿವಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಹೇಮಂತ್ ಕುಮಾರ್ ಹಾಗೂ ನಿವೃತ್ತ ಗ್ರಂಥಪಾಲಕ ರಾಮಶೇಷು ಜತೆಗಿದ್ದು ಅಗತ್ಯ ಮಾಹಿತಿ ನೀಡಿದರು.

ಈ ಕಟ್ಟಡದ ನವೀಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ದೊರೆಸ್ವಾಮಿ ಅವರು ಆರ್ಥಿಕ ನೆರವು ನೀಡಿದ್ದನ್ನು ತಿಳಿಸಿದಾಗ, ಈ ಬಗ್ಗೆ ` ದಿ ಹಿಂದೂ ‘ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಚೆನ್ನೈನಲ್ಲಿ ಓದಿದ್ದೆ ಎಂಬುದಾಗಿ ಕೇಶವ್ ದೇಸಿರಾಜು ಸ್ಮರಿಸಿಕೊಂಡರು.

ರಾಧಾಕೃಷ್ಣನ್ ಅವರು ಮೈಸೂರು ವಿವಿಯ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲೇ ಉಪರಾಷ್ಟ್ರಪತಿಯಾಗಿ ನೇಮಕಗೊಂಡರು. ಆಗ ತಮ್ಮ ಗುರುಗಳು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೊರಡುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ಅವರನ್ನು ಕಳುಹಿಸಿ ಕೊಡಲು ಸಾರೋಟನ್ನು ತಂದು ಅಲಂಕರಿಸಿ, ಕುದುರೆಯ ಬದಲು ತಾವೇ ಕುದುರೆಗಳಂತೆ, ರಾಧಾಕೃಷ್ಣನ್ ಅವರು ಕುಳಿತ ಸಾರೋಟನ್ನು ಪ್ರೀತಿಪೂರ್ವಕವಾಗಿ ರೈಲ್ವೆ ನಿಲ್ದಾಣದವರೆಗೂ ಎಳೆದು ಕೊಂಡು ಹೋಗಿ, ಭಾವಪೂರ್ಣ ವಿದಾಯ ಹೇಳಿದ್ದ ಘಟನೆಯನ್ನು ಸಹ ಕೇಶವ್ ದೇಸಿರಾಜು ಅವರು ಸ್ಮರಿಸಿಕೊಂಡರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: