ಪ್ರಮುಖ ಸುದ್ದಿ

ಪಡಿತರ ವ್ಯವಸ್ಥೆಯಲ್ಲಿ ನ್ಯೂನತೆ : ಜ.29 ರಂದು ಮಡಿಕೇರಿಯಲ್ಲಿ ಪ್ರತಿಭಟನೆ

ರಾಜ್ಯ( ಮಡಿಕೇರಿ) ಜ.22 :- ದುರ್ಬಲ ವರ್ಗದ ಅನುಕೂಲತೆಗಾಗಿ ಜಾರಿಗೆ ಬಂದಿರುವ ಪಡಿತರ ವ್ಯವಸ್ಥೆ ಸರ್ಕಾರದ ತಪ್ಪಾದ ಧೋರಣೆಗಳಿಂದ ಹಿಂಸೆಯಾಗಿ ಪರಿಣಮಿಸಿದೆ. ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳುತ್ತಿರುವ ಕ್ರಮಗಳನ್ನು ವಿರೋಧಿಸಿ ಜ.29 ರಂದು ನಗರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರ ಕಛೇರಿಯ ಎದುರು ಪ್ರತಿಭಟನೆ ನಡೆಸುವುದಾಗಿ ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ. ಇ.ರ. ದುರ್ಗಾಪ್ರಸಾದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡಿತರ ವ್ಯವಸ್ಥೆಯಲ್ಲಿರುವ ನಕಲಿ ಕಾರ್ಡ್‍ಗಳನ್ನು ಪತ್ತೆ ಹಚ್ಚುವ ಹೆಸರಿನಲ್ಲಿ ಸರ್ಕಾರ ಆಗಿಂದಾಗ್ಗೆ ಹಲವಾರು ವ್ಯರ್ಥ ಪ್ರಯತ್ನಗಳನ್ನು ಆಗಿಂದಾಗ್ಗೆ ಮಾಡುತ್ತಲೆ ಬರುತ್ತಿದೆ. ಪ್ರ್ರಸ್ತುತ ಪಡಿತರ ಕಾರ್ಡ್‍ದಾರರು ತಮ್ಮ ಬೆರಳಚ್ಚನ್ನು (ಇ-ಕೆವೈಸಿ) ತಮ್ಮ ನಿಗದಿತ ಪಡಿತರ ಅಂಗಡಿಗಳಲ್ಲಿ ನೀಡಬೇಕೆಂದು ಆದೇಶ ಹೊರಡಿಸಲಾಗಿದೆ. ಆದರೆ, ಬೆರಳಚ್ಚು ನೀಡಲು ನ್ಯಾಯ ಬೆಲೆ ಅಂಗಡಿಗಳಿಗೆ ತೆರಳಿದಾಗ ಸರ್ವರ್ ಸಮಸ್ಯೆಯ ನೆಪಹೇಳಿ ಖಾಸಗಿ ಸೇವಾ ಕೇಂದ್ರಗಳಿಗೆ ಕಳುಹಿಸಲಾಗುತ್ತಿದ್ದು, ಅಲ್ಲಿ ಪಡಿತರ ಚೀಟಿದಾರರ ಶೋಷಣೆ ನಡೆಯುತ್ತಿದೆ ಎಂದು ಆರೋಪಿಸಿದರು.
ಎಪಿಎಲ್-ಬಿಪಿಎಲ್ ನಿರ್ಣಯಕ್ಕೆ ಸರ್ಕಾರ ರೂಪಿಸುವ ಮಾನದಂಡವೇ ಅವೈಜ್ಞಾನಿಕವಾಗಿದ್ದು, ಆ ಮಾಪನವೆ ಸಾಕಷ್ಟು ಮಂದಿಯನ್ನು ಈ ವ್ಯವಸ್ಥೆಯಿಂದ ಹೊರಗಿಟ್ಟು ವಂಚನೆ ಮಾಡಿದೆ. ಇಂದು ನಡೆಯುತ್ತಿರುವ ಅವ್ಯವಹಾರಗಳಿಗೆ ಮೂಲವು ಇದೇ ಆಗಿದೆಯೆಂದು ದೂರಿದ ಅವರು, ಪಡಿತರ ಹಂಚುವ ಅಂಗಡಿಗಳು ಕೂಡ ತೆರೆದಿರಬೇಕಾದ ಸಮಯದ ಪರಿಪಾಲನೆ ಮಾಡುತ್ತಿಲ್ಲ. ಪಡಿತರ ಸಾಮಗ್ರಿಗಳನ್ನು ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ. ಹಲವು ಅಂಗಡಿಗಳಲ್ಲಿ ತೂಕದಲ್ಲಿ ವಂಚನೆ ನಡೆಯುತ್ತಿದೆ. ಸರಕುಗಳ ನಿಗದಿತ ಬೆಲೆಗಿಂತ ಹೆಚ್ಚಿನ ದರವನ್ನು ಗ್ರಾಹಕರಿಂದ ಪಡೆಯಲಾಗುತ್ತಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾರದರ್ಶಕತೆಯನ್ನು ಸೃಷ್ಟಿಸುವ ಹೆಸರಿನಲ್ಲಿ ಸರ್ಕಾರ ದಿನಕ್ಕೊಂದು ನಿಯಮ ರೂಪಿಸುತ್ತಿದ್ದು, ಈ ನಿಯಮಗಳು ಜನರಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸುತ್ತಿದೆ.ಪಡಿತರ ವಿತರಣೆಯಲ್ಲಿರುವ ಅವ್ಯವಹಾರಗಳಿಗೆ ಜನಸಾಮಾನ್ಯರೇ ಕಾರಣ ಎಂಬಂತೆ ಸರ್ಕಾರ ಚಿಂತಿಸುತ್ತಿದ್ದು, ಅದಕ್ಕೆ ಅನುಗುಣವಾಗಿ ವರ್ತಿಸುತ್ತಿರುವುದರಿಂದಲೇ ಪಡಿತರ ವ್ಯವಸ್ಥೆಯಲ್ಲಿ ಇಂದು ಉದ್ಭವಿಸಿರುವ ಜನವಿರೋಧಿ ಸಮಸ್ಯೆಗಳಿಗೆ ಕಾರಣವಾಗಿದೆಯೆಂದು ದುರ್ಗಾಪ್ರಸಾದ್ ಆರೋಪಿಸಿದರು.
ಎಲ್ಲಾ ನಕಲಿ ಕಾರ್ಡ್‍ಗಳ ಸೃಷ್ಟಿಗೆ ಖಾಸಗಿ ಸಂಸ್ಥೆಗಳೇ ಕಾರಣವಾಗಿದ್ದು,ಅವರು ನಡೆಸುವ ಎಲ್ಲಾ ಕೃತ್ರಿಮಗಳಲ್ಲು ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ. ಸರ್ಕಾರ ತನ್ನನ್ನು ತಿದ್ದಿಕೊಳ್ಳುವ ಮತ್ತು ತನ್ನ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ತಾನು ನಡೆಸುತ್ತಿರುವ ವಂಚನೆಯನ್ನು ಮರೆಮಾಚಲು ಜನಸಾಮಾನ್ಯರನ್ನು ಹಿಂಸಿಸುತ್ತಿದೆ ಎಂದು ದುರ್ಗಾಪ್ರಸಾದ್ ದೂರಿದರು.
ಎಪಿಎಲ್-ಬಿಪಿಎಲ್ ಮಾನದಂಡಗಳಿಂದ ಮುಕ್ತವಾಗಿ ಎಲ್ಲಾ ಕುಟುಂಬಗಳಿಗೂ ಮಾಸಿಕ 30 ಕೆ.ಜಿ. ಅಕ್ಕಿಯನ್ನು ನೀಡುವಂತಾಗಬೇಕು, ನಕಲಿ ಕಾರ್ಡ್‍ಗಳ ಸೃಷ್ಟಿಗೆ ಕಾರಣರಾಗಿರುವ ಅಧಿಕಾರಿಗಳನ್ನು ಶಿಕ್ಷಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಜ.29 ರಂದು ಪೂರ್ವಾಹ್ನ 11 ಗಂಟೆಯಿಂದ ಮಡಿಕೇರಿಯ ಆಹಾರ ಇಲಾಖೆಯ ಎದುರು ಸಾಂಕೇತಿಕ ಪ್ರತಿಭಟನೆ ನಡೆಸುವುದಾಗಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐಎಂ ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್.ಬಿ. ರಮೇಶ್ ಹಾಗೂ ಎ.ಸಿ.ಸಾಗು ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: