ಮೈಸೂರು

ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಭಾಗವಹಿಸಲು ಬುಡಕಟ್ಟು ಸಮುದಾಯಕ್ಕೆ ಸೇರಿದ ಹಾಸನ ಜಿಲ್ಲೆ ಅಂಗಡಿ ಗ್ರಾಮದ ಹಕ್ಕಿಪಿಕ್ಕಿ ಸಮುದಾಯ ಆಯ್ಕೆ

ಮೈಸೂರು,ಜ.22:- ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ  ಈ ಬಾರಿ ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಭಾಗವಹಿಸಲು ಬುಡಕಟ್ಟು ಸಮುದಾಯಕ್ಕೆ ಸೇರಿದ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅಂಗಡಿ ಗ್ರಾಮದ ಹಕ್ಕಿಪಿಕ್ಕಿ ಸಮುದಾಯದ ಹೂರಾಜು ಮತ್ತು ಅವರ ಪತ್ನಿ ಚಂದೋಶಿ ಅವರನ್ನು ಆಯ್ಕೆ ಮಾಡಿದೆ.

ನಿನ್ನೆ ಅವರನ್ನು ಬುಡಕಟ್ಟು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಪರಿಚಯಿಸಿದ ಸಂಸ್ಥೆಯ ನಿರ್ದೇಶಕ ಪ್ರೊ.ಟಿ.ಟಿ.ಬಸವನಗೌಡ ಮಾತನಾಡಿ  ‘ಇವರು ಅಲ್ಲಿ ಕೇವಲ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವುದು ಮಾತ್ರವಲ್ಲದೇ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಅವರೊಂದಿಗೆ ಚಹಾಕೂಟದಲ್ಲೂ ಭಾಗವಹಿಸಲಿದ್ದಾರೆ. ಅಲ್ಲಿ ತಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಲು ಅವಕಾಶ ಇದೆ’ ಎಂದು ತಿಳಿಸಿದರು.

ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತದಿಂದ ಪರಿಶಿಷ್ಟ ಪಂಗಡದ ತಲಾ ಇಬ್ಬರನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ವಿವಿಧ ಬಗೆಯ ಸಂಸ್ಕೃತಿಗಳ ಪರಿಚಯ ಆಗುವುದಷ್ಟೇ ಅಲ್ಲ ಅವರ ಸಮಸ್ಯೆಗಳ ಅನಾವರಣವೂ ಆಗಲಿದೆ. ಇದೊಂದು ಅಪರೂಪದ ಅವಕಾಶ ಎಂದರು.

ಈ ವೇಳೆ   ಹೂರಾಜು ಮಾತನಾಡಿ, ‘ನಮ್ಮ ಹಕ್ಕಿಪಿಕ್ಕಿ ಸಮುದಾಯ  ಅಸ್ಮಿತೆಯ ಹುಡುಕಾಟದಲ್ಲಿದೆ. ನಾವೂ ಇದ್ದೀವಿ ಎಂದು ನಾವೇ ಕೂಗಿ ಹೇಳುವಂತಹ ಸ್ಥಿತಿ ಇನ್ನೂ ಇದೆ. ನಮ್ಮ ಮೂಲಕಸುಬುಗಳು ನಾಶವಾಗಿ, ಅತಂತ್ರವಾಗಿದ್ದೇವೆ’ ಎಂದು ಅಳಲು ತೋಡಿಕೊಂಡರು.

ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸುವುದೇ ಕೆಲಸ ಎಂದು ಅಧಿಕಾರಿಗಳು ಭಾವಿಸಿದ್ದಾರೆ. ಸರ್ಕಾರವೇನೋ ಬುಡಕಟ್ಟು ಸಮುದಾಯವರಿಗೆ ಹಿತವಾಗಲಿ ಎಂದು ಕಾಯ್ದೆ ರೂಪಿಸುತ್ತದೆ. ಆದರೆ, ಅದರ ಅನುಷ್ಠಾನ ಮಾತ್ರ ಸರಿಯಾಗಿ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ನಮ್ಮ ಪೂರ್ವಿಕರನ್ನು ನಾವು ಕಾಡಿನಲ್ಲೇ ಮಣ್ಣು ಮಾಡಿದ್ದೇವೆ. ಅವರ ಸಮಾಧಿ ನೋಡಲೂ ಇಂದು ಆಗುವುದಿಲ್ಲ. ನಮ್ಮನ್ನು ಮಣ್ಣು ಮಾಡಲು ಸ್ಮಶಾನವೂ ಇಲ್ಲ. ರಸ್ತೆ ಬದಿಯಲ್ಲಿ ಹೂಳಬೇಕಾದ ಸ್ಥಿತಿ ಇದೆ ಎಂದು ಕಿಡಿಕಾರಿದರು.

ಈ ವೇಳೆ ಅವರು ತಮ್ಮನ್ನು ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಭಾಗವಹಿಸಲು ಆಯ್ಕೆ ಮಾಡಿದ ಸಂಸ್ಥೆಗೆ ಧನ್ಯವಾದ ಅರ್ಪಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: