ಮೈಸೂರು

ಮಾನಸ ಗಂಗೋತ್ರಿ ವಿದ್ಯಾರ್ಥಿಗಳ ಮೇಲೆ ಹಾಕಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಜ.22:- ಮಾನಸ ಗಂಗೋತ್ರಿ ವಿದ್ಯಾರ್ಥಿಗಳ ಮೇಲೆ ಹಾಕಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಸಂವಿಧಾನ ರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಇಂದು  ಟೌನ್‌ಹಾಲ್ ಮುಂಭಾಗವಿರುವ ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಮಾತನಾಡಿ  ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ದೇಶದ ರಾಜಕೀಯ, ಸಾಮಾಜಿಕ ಬೆಳವಣಿಗೆಗೆ ಸ್ಪಂದಿಸುವ ಮಾನವೀಯ ನಡವಳಿಕೆಯನ್ನು ಹೊಂದಿರುತ್ತಾರೆ.   ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್ ಮತ್ತು ಇತರೆ ವಿದ್ಯಾರ್ಥಿಗಳ ಮೇಲೆ ಮನುವಾದಿ ಸಂಘಟನೆಗಳ ಮುಸುಕುಧಾರಿ ಗೂಂಡಾಗಳು ಮಾರಕಾಸ್ತ್ರಗಳಿಂದ ನಡೆಸಿದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಹಾಗೂ ಎನ್ ಆರ್ ಸಿ, ಸಿಎಎ  ಕಾಯ್ದೆಗಳನ್ನು ವಿರೋಧಿಸಿ  08-01-2020ರಂದು ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯ ಸಮಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿನಿಯೊಬ್ಬರು “ಫ್ರೀ ಕಾಶ್ಮೀರ” ಎಂಬ ಫಲಕವನ್ನು ಪ್ರದರ್ಶಿಸಿದ್ದರು. ಇದನ್ನೇ ನೆಪ ಒಡ್ಡಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ಐ.ಪಿ.ಸಿ. ಸೆಕ್ಷನ್ 124(ಎ) ದೇಶದ್ರೋಹದ ಗಂಭೀರ ಆಪಾದನೆ ಮಾಡಿ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಘಟನೆಯ ಕುರಿತು ಜಯಲಕ್ಷ್ಮೀಪುರಂ ಪೊಲೀಸರು ಯಾವುದೇ ರೀತಿಯ ವಿವರವಾದ ತನಿಖೆ ನಡೆಸದೆ, ರಾಜಕೀಯ ಒತ್ತಡಕ್ಕೆ ಮಣಿದು, ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಗಂಭೀರ ಆಪಾದನೆ ಹೊರಿಸಿ ವಿದ್ಯಾರ್ಥಿಗಳಲ್ಲಿ ಭಯಭೀತಿ ಉಂಟುಮಾಡಿರುತ್ತಾರೆ. ಇದು ಸಂವಿಧಾನ ವಿರೋಧಿ ನಡವಳಿಕೆಯಾಗಿದೆ ಎಂದು ಆರೋಪಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಸಂವಿಧಾನವು ಎಲ್ಲಾ ಪ್ರಜೆಗಳಿಗೂ ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸುವ ಸ್ವಾತಂತ್ರ ವನ್ನು ನೀಡಿದೆ. ಜೊತೆಗೆ ಸಭೆಸಮಾರಂಭಗಳನ್ನು ಆಯೋಜಿಸುವ ಮತ್ತು ಪ್ರತಿಭಟಿಸುವ ಹಕ್ಕನ್ನೂ ನೀಡಿದೆ. ಈಗ ಈ ಹಕ್ಕುಗಳನ್ನು ದಮನ ಮಾಡುವ ಹುನ್ನಾರ ನಡೆಯುತ್ತಿದೆ. ಇಂತಹ ಮನುವಾದಿ ಹುನ್ನಾರಗಳನ್ನು ತಡೆಗಟ್ಟಲು ನಾಗರೀಕರೆಲ್ಲರೂ ಮುಂದಾಗಬೇಕು ಎಂದರು.

ಪ್ರತಿಭಟನೆಯಲ್ಲಿ ಹೋರಾಟಗಾರರು, ಚಿಂತಕರು, ಪ್ರಗತಿಪರರು, ರೈತರು, ಕಾರ್ಮಿಕರು ಹಾಗೂ ಸಂವಿಧಾನ ಪ್ರೇಮಿಗಳು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: