ಮೈಸೂರು

ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವ : ದಾಂಪತ್ಯ ಜೀವನಕ್ಕೆ ಕಾಲಿರಿಸಿದ 178 ಜೋಡಿ

ಮೈಸೂರು,ಜ.22:-  ಅಲ್ಲಿ ಜಾತಿ ಇಲ್ಲ, ಅಲ್ಲಿ ಧರ್ಮ ಇಲ್ಲ, ಮೇಲು ಕೀಳು ಎಂಬುದು ಇಲ್ಲವೇ ಇಲ್ಲ. ಎಲ್ಲರನ್ನೂ ಸಮಾನತೆಯಿಂದ ಕಾಣುವ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಇಂದು ಸರಳವಾಗಿ ನಡೆಯಿತು.

ಮೈಸೂರು ಜೆಲ್ಲೆ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ನಡೆಯುತ್ತಿರುವ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಸುತ್ತೂರು ಶ್ರೀಗಳ ದಿವ್ಯ ಸಾನಿಧ್ಯದಲ್ಲಿ , ಕನಕಪುರ ಮುಮ್ಮಡಿ ನಿರ್ವಾಣ ಸ್ವಾಮಿಗಳು,ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ  ದೀಪ ಬೆಳಗಿಸುವುದರ ಮೂಲಕ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೃಹತ್ ಸಾಮೂಹಿಕ ವಿವಾಹ ವೇದಿಕೆಯಲ್ಲಿ ಉಚಿತ ವಿವಾಹ ಮಹೋತ್ಸವದ ಜೊತೆಗೆ ವಧುವರರಿಗೆ ಮಾಂಗಲ್ಯ,ಸೀರೆ,ಪಂಚೆ ಶರ್ಟ್ ಉಡುಗೊರೆಯಾಗಿ ನೀಡಲಾಯಿತು.

ವೇದಿಕೆಯ ಎಡ ಮತ್ತು ಬಲ ಭಾಗದಲ್ಲಿ ಆಸೀನರಾಗಿದ್ದ ಜೋಡಿಗಳಿಗೆ ಆರ್.ಎಸ್ ಎಸ್ ಜಂಟಿ ಕಾರ್ಯದರ್ಶಿ ಮುಕುಂದ್ ವಿವಾಹ ಪ್ರತಿಜ್ಞಾವಿಧಿ ಬೋಧಿಸಿದರು. ನಿರ್ವಾಹಕರ ಸೂಚನೆ ಬಂದ ಕೂಡಲೇ ಸುಮಾರು 12 ಗಂಟೆಗೆ ಶುಭ ಘಳಿಗೆಯಲ್ಲಿ  ಗಣ್ಯರ ನಡುವೆ ತಾಳಿ ಕಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನವ ವಧುವರರಿಗೆ ಸುತ್ತೂರು ಶ್ರೀಗಳು,ಮಠಾಧೀಶರು,ಗಣ್ಯರು ಶುಭ ಸಂದೇಶ ಹಾಗೂ ಪ್ರಮಾಣ ಪತ್ರ ವಿತರಿಸಿದರು‌.

ಬರೋಬ್ಬರಿ 178 ಜೋಡಿಗಳು ಜಾತಿ ಭೇದ ಮರೆತು ಕುಟುಂಬ, ಗುರು ಹಿರಿಯರ ಸಮ್ಮುಖದಲ್ಲಿ ಸತಿ-ಪತಿಯಾದರು. ವಿಕಲಚೇತನ ಜೋಡಿ, ವಿಧುರ-ವಿಧವೆ ಹಾಗೂ ಜಾತಿ-ಧರ್ಮದ ಹಂಗು ತೊರೆದ ಜೋಡಿಗಳೂ ಹಸೆಮಣೆ ಏರುವ ಮೂಲಕ, ಸಾಮೂಹಿಕ ವಿವಾಹಕ್ಕೆ ಪ್ರಗತಿಪರ ಸೌಂದರ್ಯದ ಸ್ಪರ್ಶ ನೀಡಿದರು.

ಈ ಜೋಡಿಗಳ ಪೈಕಿ 106 ಜೋಡಿಗಳು ಪರಿಶಿಷ್ಟ ಜಾತಿ, 10 ಜೋಡಿ ಪರಿಶಿಷ್ಟ ಪಂಗಡ,ಅಂತರ ಜಾತಿ 18,ವೀರಶೈವ,ಲಿಂಗಾಯತ 11, ಹಿಂದುಳಿದ ವರ್ಗ 33 ಜೋಡಿಗಳು.178 ರಲ್ಲಿ ವಿಶೇಷ ಜೋಡಿಗಳಿದ್ದಾರೆ. 2 ತಮಿಳುನಾಡಿನ ಜೋಡಿ,5 ಅಂಗವಿಕಲರು,2 ವಿಧುರ ವಿಧವೆ ಹಸೆಮಣೆ ಏರಿದ್ದು ವಿಶೇಷ. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ನಡೆಯುತ್ತಿರುವ ಸಾಮೂಹಿಕ ವಿವಾಹ ಈವರೆಗೆ 2789 ಜೋಡಿಗಳು ಈ ಸೌಲಭ್ಯ ಪಡೆದುಕೊಂಡಿದ್ದಾರೆ. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿ ನವ ದಂಪತಿಗಳಿಗೆ ಶುಭ ಹಾರೈಸಿದರು.ನಂತರ ಜೋಡಿಗಳೆಲ್ಲರೂ ಸಾಮೂಹಿಕವಾಗಿ ವಿಶೇಷ ಭೋಜನ ಸವಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: