ಪ್ರಮುಖ ಸುದ್ದಿ

ವಿರಾಜಪೇಟೆಯಲ್ಲಿ ಮೇ 1 ರಿಂದ 3ರವರೆಗೆ ಬಂಟರ ಕ್ರೀಡಾಕೂಟ

ರಾಜ್ಯ( ಮಡಿಕೇರಿ) ಜ.24 :- ಕೊಡಗು ಜಿಲ್ಲಾ ಬಂಟರ ಸಂಘದ ವತಿಯಿಂದ 5 ನೇ ವರ್ಷದ ಬಂಟರ ಕ್ರೀಡಾಕೂಟ ಮೇ 1 ರಿಂದ 3ರವರೆಗೆ ವೀರಾಜಪೇಟೆಯಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್.ರತ್ನಾಕರ ಶೆಟ್ಟಿ, ವೀರಾಜಪೇಟೆ ತಾಲ್ಲೂಕು ಬಂಟರ ಸಂಘದ ಸಹಯೋಗದೊಂದಿಗೆ ವೀರಾಜಪೇಟೆ ಸಂತ ಅನ್ನಮ್ಮ ಶಾಲೆಯ ಮೈದಾನದಲ್ಲಿ ಕ್ರೀಡಾಕೂಟ ಜರುಗಲಿದೆ ಎಂದರು. ಸ್ವಜಾತಿ ಬಂಟರ ಸಮುದಾಯದ ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ಮಹಿಳೆಯರಿಗೆ ಥ್ರೋಬಾಲ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅದೇ ರೀತಿ ಶಾಲಾ ಕಾಲೇಜು ವಿಭಾಗದ ಮಕ್ಕಳಿಗೂ ವಿವಿಧ ವಿಭಾಗಗಳಲ್ಲಿ ಆಟೋಟದ ಸ್ಪರ್ಧೆಗಳನ್ನು ನಡೆಸಲಾಗುವುದೆಂದು ತಿಳಿಸಿದರು.
ಕ್ರೀಡಾಕೂಟದ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮುದಾಯದ ಗಣ್ಯರು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೂ ನೆನಪಿನ ಕಾಣಿಕೆ ಹಾಗೂ ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು. ಕ್ರಿಡಾಕೂಟದ ಯಶಸ್ಸಿಗೆ ಬಂಟ ಸಮುದಾಯ ಬಾಂಧವರು ಸಹಕಾರ ನೀಡಬೇಕೆಂದು ರತ್ನಾಕರ ಶೆಟ್ಟಿ ಮನವಿ ಮಾಡಿದರು.
ಕ್ರೀಡಾಕೂಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ತಂಡಗಳು ಏ.15 ರ ಒಳಗಾಗಿ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ ಸುಧೀಶ್ ರೈ ಮೊ.9663956586, ಸಂಪತ್ ಶೆಟ್ಟಿ ಮೊ.9986873386, ಹಾಗೂ ಶಬರೀಶ್ ಶೆಟ್ಟಿ ಮೊ.9900580308 ಸಂಪರ್ಕಿಸಬಹುದೆಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ಬಿ.ಡಿ. ನಾರಾಯಣ ರೈ, ಗೌರವಾಧ್ಯಕ್ಷ ಕೆ.ಆರ್. ಬಾಲಕೃಷ್ಣ ರೈ, ಕ್ರೀಡಾ ಸಮಿತಿ ಅಧ್ಯಕ್ಷ ಸುಧೀಶ್ ರೈ, ಕಾರ್ಯದರ್ಶಿ ಸಂಪತ್ ಶೆಟ್ಟಿ ಹಾಗೂ ವೀರಾಜಪೇಟೆ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶಬರೀಶ್ ಶೆಟ್ಟಿ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: