ಪ್ರಮುಖ ಸುದ್ದಿ

ಗಣರಾಜ್ಯೋತ್ಸವದಂದು ಪಾಲಿಬೆಟ್ಟದಲ್ಲಿ ಸೌಹಾರ್ದ ಸಮ್ಮೇಳನ

ರಾಜ್ಯ( ಮಡಿಕೇರಿ) ಜ.24 :- ಎಸ್‍ಕೆಎಸ್‍ಎಸ್‍ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜ.26 ರ ಗಣರಾಜ್ಯೋತ್ಸವದ ಅಂಗವಾಗಿ ‘ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯೆ ಸಂಕಲ್ಪ’ ಎಂಬ ಘೋಷವಾಕ್ಯದೊಂದಿಗೆ ಮಾನವ ಸರಪಳಿ, ಸೌಹಾರ್ದ ಸಂದೇಶ ಮೆರವಣಿಗೆ ಮತ್ತು ಸೌಹಾರ್ದ ಸಮ್ಮೇಳನ ಪಾಲಿಬೆಟ್ಟದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಕಾರ್ಯದರ್ಶಿ ಶುಹೈಬ್ ಫೈಝಿ ಮಾತನಾಡಿ, ಜ. 26 ರಂದು ಸಂಜೆ 3 ಗಂಟೆಗೆ ಪಾಲಿಬೆಟ್ಟದ ಅರ್ಕಾಡ್ ಬಾಬ ಪಟನ್ ಶಾಹ್ ಅವರ ಮಖಾಂ ಝಿಯಾರತ್ ಮೂಲಕ ಸೌಹಾರ್ದ ಸಂದೇಶ ಮೆರವಣಿಗೆ ಪ್ರಾರಂಭವಗಲಿದ್ದು, ಸಂಜೆ 4 ಗಂಟೆಗೆ ಪೊಲೀಸ್ ಮೈದಾನದಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಸಮ್ಮೇಳನವನ್ನು ಮಾಜಿ ಶಾಸಕರು ಹಾಗೂ ಸುಂಟಿಕೊಪ್ಪ ಮಹಮ್ಮದ್ ಶಿಹಾಬ್ ತಂಞಳ್ ಜೂನಿಯರ್ ಶರೀಹತ್ ಕಾಲೇಜಿನ ವ್ಯವಸ್ಥಾಪಕ ಕೆ.ಎಂ. ಇಬ್ರಾಹಿ ಮಾಸ್ಟರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯರು ಹಾಗೂ ಕೊಡಗು ಜಿಲ್ಲಾ ಉಪಖಾಸಿಗಳಾದ ಎಂ.ಎಂ.ಅಬ್ದುಲ್ಲ ಪೈಝಿ ವಹಿಸಲಿದ್ದಾರೆ. ಎಸ್‍ಕೆಎಸ್‍ಎಸ್‍ಎಫ್ ಜಿಲ್ಲಾ ಉಪಾಧ್ಯಕ್ಷ ಎಂ. ತಮ್ಲೀಕ್ ದಾರಿಮಿ ಮುಖ್ಯ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಸಕಲೇಶ್‍ಪುರದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಜಿ, ದೇವರಪುರ ಸಂತ ಜೋಸೆಫರ ಆಶ್ರಮದ ಫಾದರ್ ಸುದೀಪ್, ಎಸ್‍ಕೆಜೆಎಮ್‍ಸಿಸಿ ಕೇಂದ್ರ ಕಾರ್ಯದರ್ಶಿ ಎಂ.ಅಬ್ದುಲ್ ರಹಮಾನ್ ಉಸ್ತಾದ್, ಇಸ್ಮಾಯಿಲ್ ಮುಸ್ಲಿಯಾರ್, ಕೆ.ಪಿ. ಅಬೂಬಕ್ಕರ್ ಮುಸ್ಲಿಯಾರ್, ಪಾಲಿಬೆಟ್ಟ ಪಂ. ಅಧ್ಯಕ್ಷ ಬಿ.ಪಿ. ಬೋಪಣ್ಣ, ಹೊದ್ದೂರು ಗ್ರಾಮಾಭಿವೃದ್ಧಿ ಅಧಿಕಾರಿ ಎ.ಎ. ಅಬ್ದುಲ್ಲ ನೆಲ್ಯಹುದಿಕೇರಿ, ಪಾಲಿಬೆಟ್ಟ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್, ಉಸ್ಮಾನ್ ಫೈಝಿ ಸುಂಟಿಕೊಪ್ಪ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಳೆದ ಹನ್ನೆರಡು ವರ್ಷಗಳಿಂದ ಎಸ್‍ಕೆಎಸ್‍ಎಸ್‍ಎಫ್ ಕೊಡಗು ಜಿಲ್ಲಾ ಸಮಿತಿಯೂ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ‘ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯೆ ಸಂಕಲ್ಪ’ ಎಂಬ ದ್ಯೇಯ ವಾಕ್ಯದೊಂದಿಗೆ ಬೃಹತ್ ಮಾನವ ಸರಪಳಿ ಹಾಗೂ ಸೌಹಾರ್ದ ಸಮ್ಮೇಳನ ಮತ್ತು ಸೌಹಾರ್ದ ಸಂದೇಶ ಮೆರವಣಿಗೆಯನ್ನು ನಡೆಸುತ್ತ ಬಂದಿದೆ ಎಂದರು.
ಕೋಮುವಾದ, ಭಯೋತ್ಪಾದನೆಯ ವಿರುದ್ಧ ಸಮರ ಸಾರುತ್ತಾ ದೇಶದ ಭದ್ರತೆಗೆ ದೃಢ ಸಂಕಲ್ಪ ಸಾರುವ ಬೃಹತ್ ಮಾನವ ಸರಪಳಿ ಸೌಹಾರ್ದ ಸಂದೇಶ ಕಾರ್ಯಕ್ರಮವಾಗಿದ್ದು, ವಿವಿಧ ಧರ್ಮಗಳ ಧರ್ಮಗುರುಗಳ ನೇತೃತ್ವದಲ್ಲಿ ನಡೆಯುವ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸುಂದರ ಕಾರ್ಯಕ್ರಮವಾಗಿದೆ. ಸಂವಿಧಾನದ ಕಗ್ಗೊಲೆ, ಧರ್ಮ ಧರ್ಮಗಳ ಮಧ್ಯೆ ಬಿರುಕು ಸೃಷ್ಠಿಸುವ ಪರಸ್ಪರ ಕೋಮುಗಲಭೆ ಸೃಷ್ಟಿಸುವವರನ್ನು ಎಸ್‍ಕೆಎಸ್‍ಎಸ್‍ಎಫ್ ವಿರೋಧಿಸುತ್ತಾ ಬಂದಿದೆ.
ದೇಶದ ಭವ್ಯತೆಗೆ ದಕ್ಕೆ ತರುವ ಯಾವುದೇ ನಿಯಮಗಳನ್ನು ಭಾರತೀಯರು ಅಂಗೀಕರಿಸುವುದಿಲ್ಲ ಎಂಬುವುದು ನೈಜ್ಯ ಸತ್ಯವಾಗಿದ್ದು, ಭವ್ಯ ಭಾರತದ ಸುಂದರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಲುವಾಗಿ ಎಸ್‍ಕೆಎಸ್‍ಎಸ್‍ಎಫ್ ಜಿಲ್ಲೆಯಲ್ಲೂ ವಿನೂತನ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸದಾ ಮುಂಚೂಣಿಯಲ್ಲಿದೆ ಎಂದು ಶುಹೈಬ್ ಫೈಝಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷ ನೌಶಾದ್ ಫೈಝಿ, ಜಂಟಿ ಕಾರ್ಯದರ್ಶಿ ಶಮೀರ್ ಸಿದ್ದಾಪುರ, ವ್ಯವಸ್ಥಾಪಕ ಅಬ್ದುಲ್ ಕರೀಮ್ ಮುಸ್ಲಿಯಾರ್ ಹಾಗೂ ಸದಸ್ಯ ಸಹದ್ ಫೈಝಿ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: