Uncategorized

ಬಾಲ್ ಗರ್ಲ್ ಕ್ಷಮೆ ಕೋರಿದ ರಾಫೆಲ್ ನಡಾಲ್

ಮೆಲ್ಬೋರ್ನ್‌,ನ.24-ಆಕಸ್ಮಿಕವಾಗಿ ಬಾಲ್ ಗರ್ಲ್ ಗೆ ಹೊಡೆದ ವಿಶ್ವದ ನಂ.1 ಟೆನ್ನಿಸ್ ಆಟಗಾರ ರಾಫೆಲ್ ನಡಾಲ್ ಬಾಲಕಿಯ ಕ್ಷಮೆ ಕೇಳಿದ್ದಾರೆ. ನಡಾಲ್ ರ ನಡೆಗೆ ಕ್ರೀಡಾ ಜಗತ್ತು ಮನಸೋತಿದೆ.

ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ನಿನ್ನೆ ನಡೆದ ಪುರುಷರ ವಿಭಾಗದ ಸಿಂಗಲ್ಸ್‌ ವಿಭಾದ 2ನೇ ಸುತ್ತಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ.

ರಾಫೆಲ್ ನಡಾಲ್ ಆಕಸ್ಮಿಕವಾಗಿ ಚೆಂಡನ್ನು ಬಾಲ್‌ ಗರ್ಲ್‌ಗೆ ಹೊಡೆದಿದ್ದಾರೆ. ಚೆಂಡು ಹುಡುಗಿಗೆ ಬೀಳುತ್ತಿದ್ದಂತೆಯೇ ಆಕೆಗೆ ಏನಾಯಿತೆಂದು ವಿಚಾರಿಸಲು ಕೂಡಲೇ ಧಾವಿಸಿದ ನಡಾಲ್‌ ಬಾಲಕಿ ಕೆನ್ನೆಗೆ ಮುತ್ತಿಟ್ಟು ಕ್ಷಮೆ ಕೋರಿದ್ದಾರೆ. ಬಳಿಕ ತಮ್ಮ ಹೆಡ್‌ಬ್ಯಾಂಡ್‌ ಅನ್ನು ಉಡುಗೊರೆಯಾಗಿ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಪಂದ್ಯದಲ್ಲಿ ಅರ್ಜೆಂಟೀನಾದ ಎದುರಾಳಿ ಫೆಡ್ರಿಕೊ ಡೆಲ್ಬೊನಿಸ್‌ ಅವರನ್ನು 6-3, 7-6, 6-1 ಅಂತರದ ಸೆಟ್‌ಗಳಿಂದ ಮಣಿಸಿದ ನಡಾಲ್‌, ಪಂದ್ಯದ ಮೂರನೇ ಸೆಟ್‌ ವೇಳೆ ಚೇರ್‌ ಅಂಪೈರ್‌ ಬಳಿ ಚೆಂಡು ತೆಗೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಹುಡುಗಿಗೆ ಅಕಸ್ಮಾತಾಗಿ ಹೊಡೆದರು. ಡೆಲ್ಬೊನಿಸ್‌ ಕೂಡ ಬಾಲಕಿಯ ಬಳಿ ತೆರಳಿ ಆಕೆಯನ್ನು ಮಾತನಾಡಿಸಿದರು.

`ಆಕೆಗೆ ಏನಾಯಿತೋ ಎಂದು ಆತಂಕಕ್ಕೆ ಒಳಗಾಗಿದ್ದೆ. ಏಕೆಂದರೆ ಚೆಂಡು ವೇಗವಾಗಿ ಹಾರಿ ಆಕೆಗೆ ಬಡಿದಿತ್ತು. ಆಕೆಗೆ ಏನೂ ಆಗಲಿಲ್ಲ ಎಂದು ತಿಳಿದ ಬಳಿಕ ಸಮಾಧಾನವಾಯಿತು. ಆಕೆ ಬಹಳ ಧೈರ್ಯವಂತೆ. ವೆಲ್‌ ಡನ್‌’ ಎಂದು ಪಂದ್ಯದ ಬಳಿಕ ಮಾತನಾಡಿದ ನಡಾಲ್‌ ಘಟನೆ ಕುರಿತಾಗಿ ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ನಡಾಲ್‌ ಮುಂದಿನ ಪಂದ್ಯದಲ್ಲಿ ಸ್ವದೇಶಿ ಮಿತ್ರ ಆಟಗಾರ ಹಾಗೂ 27ನೇ ಶ್ರೇಯಾಂಕ ಹೊಂದಿರುವ ಪಾಬ್ಲೊ ಕರೆನೊ ಬುಸ್ಟಾ ವಿರುದ್ಧ ಸೆಣಸಲಿದ್ದಾರೆ.

ಗುರುವಾರದ ಆಟದಲ್ಲಿ ಸ್ಟಾರ್‌ಗಳಾದ ಸಿಮೋನಾ ಹ್ಯಾಲೆಪ್‌, ಎಲಿನಾ ಸ್ವೀಟೊಲಿನಾ, ಸ್ಟ್ಯಾನ್‌ ವಾವ್ರಿಂಕಾ ಮತ್ತು ನಿಕ್‌ ಕಿರಿಯೋಸ್‌ ಪ್ರತ್ಯೇಕ ಸಿಂಗಲ್ಸ್‌ ಪಂದ್ಯಗಳಲ್ಲಿ ಗೆದ್ದು 3ನೇ ಸುತ್ತಿಗೆ ದಾಪುಗಾಲಿಟ್ಟಿದ್ದಾರೆ. ಕಳೆದ ಬಾರಿಯ ಎಟಿಪಿ ಫೈನಲ್ಸ್‌ ಚಾಂಪಿಯನ್‌ ಬಲ್ಗೇರಿಯಾದ ಗ್ರಿಗೊರ್‌ ದಿಮಿಟ್ರೋವ್‌ ಆಘಾತ ಅನುಭವಿಸಿದರೆ, ಮಹಿಳಾ ಡಬಲ್ಸ್‌ನಲ್ಲಿ ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಮೊಣಕಾಲಿನ ಗಾಯದ ಸಮಸ್ಯೆ ಎದುರಿಸಿ ಸ್ಪರ್ಧೆಯಿಂದ ಹಿಂದೆ ಸರಿದರು. (ಎಂ.ಎನ್)

Leave a Reply

comments

Related Articles

error: