ದೇಶಪ್ರಮುಖ ಸುದ್ದಿ

ವಿಚಾರವಾದಿ ಪೆರಿಯಾರ್ ರಾಮಸ್ವಾಮಿ ಪ್ರತಿಮೆ ಧ್ವಂಸ

ಚೆನ್ನೈ,ಜ.24- ದ್ರಾವಿಡ ಚಳವಳಿಯ ರೂವಾರಿ, ವಿಚಾರವಾದಿ ಪೆರಿಯಾರ್ ರಾಮಸ್ವಾಮಿ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.

ಚೆಂಗಲ್ ಪೇಟೆಯ ಕಲಿಯಾಪಟ್ಟೈ ಗ್ರಾಮದಲ್ಲಿದ್ದ ಪೆರಿಯಾರ್ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಪೆರಿಯಾರ್ ಪ್ರತಿಮೆಯ ಬಲ ಕೈ ಹಾಗೂ ಮುಖವನ್ನು ಒಡೆದು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರು ಪ್ರತಿಮೆ ಧ್ವಂಸವಾಗಿರುವುದನ್ನು ಕಂಡ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರತಿಮೆಯ ತಲೆ ಭಾಗ ಹಾಗೂ ತುಂಡಾದ ಬಲಗೈ ಭಾಗವನ್ನು ಮುಚ್ಚಿದ್ದಾರೆ. ಸ್ಥಳದಲ್ಲಿ ಸಾಕಷ್ಟು ಜನರು ನೆರೆದಿದ್ದು, ಪೊಲೀಸ್ ತನಿಖೆ ಮುಂದುವರಿದಿದೆ.

ಇತ್ತೀಚೆಗೆ ತಮಿಳು ಮ್ಯಾಗಜೀನ್ ತುಘಲಕ್ 50ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಟ ರಜನಿಕಾಂತ್ ಅವರು, 1971ರಲ್ಲಿ ಸೇಲಂನಲ್ಲಿ ಪೆರಿಯಾರ್ ರಾಮಸ್ವಾಮಿ ಅವರು ಬೃಹತ್ ರಾಲಿ ನಡೆಸಿ, ಶ್ರೀರಾಮಚಂದ್ರ ಹಾಗೂ ಸೀತೆಯ ನಗ್ನ ಫೋಟೋ ಮೆರವಣಿಗೆ ಮಾಡಿಸಿದ್ದರು. ಆದರೆ ಈ ಬಗ್ಗೆ ಯಾವ ಪತ್ರಿಕೆಯೂ ವರದಿ ಮಾಡಿಲ್ಲವಾಗಿತ್ತು. ಆದರೆ ತುಘಲಕ್ ಪತ್ರಿಕೆ ಮಾತ್ರ ವರದಿ ಮಾಡಿ ಟೀಕಿಸಿತ್ತು ಎಂದು ಹೇಳಿದ್ದರು.

ಈ ಹೇಳಿಕೆ ಬಗ್ಗೆ ತಮಿಳುನಾಡಿನಲ್ಲಿ ಆಕ್ರೋಶವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ರಜನಿಕಾಂತ್ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದರು. ನಾನು ಪತ್ರಿಕೆಯಲ್ಲಿ ಬಂದ ವರದಿ ಬಗ್ಗೆ ಮಾತನಾಡಿದ್ದೇನೆ. ಅಂದು ಘಟನೆ ನಡೆದಿದ್ದು ಸತ್ಯ, ಈಗ ಮರೆತಿದ್ದಾರೆ. ಹೀಗಾಗಿ ನಾನು ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ರಜನಿಕಾಂತ್ ಹೇಳಿದ್ದರು. (ಎಂ.ಎನ್)

Leave a Reply

comments

Related Articles

error: