ಪ್ರಮುಖ ಸುದ್ದಿ

ವಿವೇಕಾನಂದರ ಮಾರ್ಗದರ್ಶನದ ಅನುಕರಣೆ ಯುವ ಸಮೂಹಕ್ಕೆ ಅಗತ್ಯ : ಜಿಲ್ಲಾ ಒಕ್ಕೂಟದ ಮಾಜಿ ಅಧ್ಯಕ್ಷ ವೆಂಕಟೇಶ್ ಅಭಿಪ್ರಾಯ

ರಾಜ್ಯ( ಮಡಿಕೇರಿ) ಜ. 24 :- ವಿವೇಕಾನಂದರು ಭಾರತದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಎತ್ತರಿಸಿದವರು, ಭಾರತದ ಕುರಿತಂತೆ ವಿಶ್ವದ ಜನ ಮಾನಸದಲ್ಲಿ ಕೀಳರಿಮೆ ತುಂಬಿದ್ದ ಕಾಲದಲ್ಲಿ ಅದನ್ನು ತೊಡೆದು ಹಾಕುವಂತೆ ಪ್ರಖರವಾಗಿ ತಮ್ಮ ಸಿದ್ಧಾಂತಗಳನ್ನು ಪ್ರತಿಪಾದಿಸಿ ವಿಶ್ವ ಪ್ರಗತಿ ಹೊಂದಿದ್ದ ದೇಶಗಳು ಭಾರತದ ಬಗ್ಗೆ ಗೌರವವನ್ನು ತಳೆಯಲು ವಿವೇಕಾನಂದರು ಕಾರಣರಾದರು ಎಂದು ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಮಾಳಿಗೆಮನೆ ವೆಂಕಟೇಶ್ ಅಭಿಪ್ರಾಯಪಟ್ಟರು.
ನೆಹರೂ ಯುವ ಕೇಂದ್ರ, ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ, ಹುಲಿತಾಳ ಭಗತ್ ಯುವಕ ಸಂಘ, ಮರಗೋಡಿನ ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಯುವ ಸಪ್ತಾಹ-ಸೈಕಲ್ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಕಾನಂದರು ಅಲ್ಪಾಯುಷಿಯಾದರೂ ಆ ಅವಧಿಯಲ್ಲಿ ಅವರು ಸಾಧಿಸಿದ್ದು ಅಪಾರ, ಜಾತೀಯತೆಯನ್ನು ತೊರೆದು ಮಾನವೀಯತೆಯನ್ನು ಮೆರೆಯಲು ಕರೆ ನೀಡಿ ತಾವೂ ಅಂತೆಯೇ ಬದುಕಿದ್ದು, ಅವರ ಮಾರ್ಗದರ್ಶನದ ಅನುಕರಣೆ ಇಂದಿನ ಯುವ ಸಮೂಹಕ್ಕೆ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಪಿ. ಎಸ್. ರವಿಕೃಷ್ಣ ಮಾತನಾಡಿ, ಮನುಷ್ಯನು ಬದುಕಿರುವ ಸಮಯದಲ್ಲಿ ಹೇಗೆ ಬದುಕಿದ ಎಂಬುದು ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಾವು ಜೀವಿಸಿದ್ದ ಸಮಯದಲ್ಲಿ ಪರೋಪಕಾರಿಯಾಗಿ ಬದುಕಿ, ಸಮಾಜಮುಖಿ ಕೆಲಸಗಳನ್ನು ಮಾಡಿ ಹೆಸರನ್ನು ಚಿರಸ್ಥಾಯಿಯಾಗುವಂತೆ ಮಾಡಿ ಕೊನೆಯಾಗಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಆವರಣದಿಂದ ಮರಗೋಡಿನ ಪ್ರಮುಖ ಬೀದಿಗಳಲ್ಲಿ ವಿವೇಕಾನಂದರ ತತ್ವಗಳ ಕುರಿತಾದ ಘೋಷವಾಕ್ಯಗಳನ್ನು ಕೂಗುತ್ತಾ ಜಾಥಾ ನಡೆಸಲಾಯಿತು.
ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ ಪ್ರಾಸ್ತಾವಿಕ ಮಾತನ್ನಾಡಿದರು. ವೇದಿಕೆಯಲ್ಲಿ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ಭಗತ್ ಯುವಕ ಸಂಘದ ಅಧ್ಯಕ್ಷ ಹೆಚ್.ಎಂ ವಿನೋದ್, ಉಪಾಧ್ಯಕ್ಷ ಪಿ.ಗೌತಮ್, ಕಾರ್ಯದರ್ಶಿ ಹೆಚ್.ದೀಪಕ್ ಮೊದಲಾದವರು ಉಪಸ್ಥಿತರಿದ್ದರು. ಹೆಚ್. ವೈ. ಪುಟ್ಟರಾಜು ಸ್ವಾಗತಿಸಿದರು. ಬಿ.ಬಿ.ಪೂರ್ಣಿಮಾ ನಿರೂಪಿಸಿ ವೆಂಕಟೇಶ್ ನಾಯಕ್ ವಂದಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: