ಮೈಸೂರು

‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನ ಪ್ರಕರಣ : ಜ.27ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು

ಮೈಸೂರು, ಜ.25:-  ಮೈಸೂರಿನ ವಿಶ್ವದ್ಯಾನಿಲಯದ  ಆವರಣದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿ ದೇಶದ್ರೋಹದ ಆರೋಪ ಎದುರಿಸುತ್ತಿರುವ ಯುವತಿ ನಳಿನಿ ಅವರ ನಿರೀಕ್ಷಣಾ ಜಾಮೀನು ಅರ್ಜಿ ಕುರಿತು ನಿನ್ನೆ  ಇಲ್ಲಿನ ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆದು ನ್ಯಾಯಾಧೀಶರು ಜ.27ಕ್ಕೆ ಆದೇಶ ಕಾಯ್ದಿರಿಸಿದರು.

ನಳಿನಿ ಪರ ವಕೀಲರಾದ ಜಗದೀಶಕುಮಾರ್‌, ಪ್ರಸನ್ನ, ಮಂಜುನಾಥ್‌, ವಿಶ್ವನಾಥ್‌, ಆಸ್ಮಾ ಪರ್ವಿನ್‌   ಇಲ್ಲಿನ ಎರಡನೇ ಅಡಿಷನಲ್‌ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ‘ಫ್ರೀ ಕಾಶ್ಮೀರ’ ಎಂದು ನಳಿನಿ ಫಲಕ ಪ್ರದರ್ಶಿಸಿದ್ದರ ಅರ್ಥ ಈ ದೇಶದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದ ಜನತೆಗೆ ಇಂಟರ್‌ನೆಟ್‌ ಸೌಲಭ್ಯವನ್ನು ಮತ್ತೆ ನೀಡಬೇಕು. ಕಾಶ್ಮೀರದ ಜನತೆ ಮುಕ್ತವಾಗಿ ಓಡಾಡುವ ವಾತಾವರಣವನ್ನು ಅಲ್ಲಿ ಸೃಷ್ಟಿಸಬೇಕು ಎಂಬುದೇ ಆಗಿದೆ. ಅದು ಆಜಾದ್‌ ಕಾಶ್ಮೀರದ ಬೇಡಿಕೆ ಅಲ್ಲ. ಹೀಗಾಗಿ, ದೇಶದ್ರೋಹದ ಯಾವುದೇ ಕೃತ್ಯವನ್ನು ನಳಿನಿ ನಡೆಸಿಲ್ಲ. ನಳಿನಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ನಳಿನಿ ಪರ ವಕೀಲರು ವಾದ ಮಂಡಿಸಿದರು.

ಮೈಸೂರಿನ ವಕೀಲರಾದ ಆಸ್ಮಾ ಪರ್ವಿನ್‌   ವಾದ ಮಂಡಿಸಿ, ತಾವು ಮೈಸೂರಿನವರೇ. ಆದರೆ, ತಮ್ಮ ಪತಿ ಕಾಶ್ಮೀರದವರು. ಅಲ್ಲಿನ ವಿಶ್ವವಿದ್ಯಾಲಯವೊಂದರಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಕಾಶ್ಮೀರದಲ್ಲಿ ಇಂಟರ್‌ನೆಟ್‌ ಸೌಲಭ್ಯವಿದ್ದಾಗ ತಮ್ಮ ಮಕ್ಕಳು ಪ್ರತಿದಿನ ತಂದೆಯೊಂದಿಗೆ ವಿಡಿಯೋ ಕಾಲ್‌ ಮೂಲಕ ಮಾತಾಡುತ್ತಿದ್ದರು. ಈಗ ಇದು ಸಾಧ್ಯವಾಗುತ್ತಿಲ್ಲ. ಫ್ರೀ ಕಾಶ್ಮೀರ ಎಂದರೆ ಇಂಟರ್‌ನೆಟ್‌ ಸೌಲಭ್ಯ ನೀಡಬೇಕು ಎಂಬುದೇ ಆಗಿದೆ ಎಂದು ತಮ್ಮದೇ ಉದಾಹರಣೆ ಸಮೇತ ಹೇಳಿದರು.

ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಚ್‌.ಡಿ.ಆನಂದಕುಮಾರ್‌ ಅವರು ಆರೋಪಿ ನಳಿನಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಬಾರದೆಂದು ವಾದಿಸಿದರು. ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸುವುದರ ಜೊತೆಗೆ ಸಂಘಟನೆ, ಹೋರಾಟ ಎಂದು ಹೇಳಿದರೆ ಇದರ ಅರ್ಥವೇನು ಎಂದು ಪ್ರಶ್ನಿಸಿದರು. ವಾದ-ಪ್ರತಿವಾದದಲ್ಲಿ ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ನಾಡಗೀತೆಯ ಸಾಲುಗಳು, ಕುವೆಂಪು ಅವರ ವಿಚಾರಗಳು ಉಲ್ಲೇಖವಾದವು.

ನ್ಯಾಯಾಧೀಶರಾದ ಜೆ.ಆರ್‌.ಮೆಂಡೋನ್ಸ ಅವರು ಜ.27ಕ್ಕೆ ಆದೇಶವನ್ನು ನೀಡುವುದಾಗಿ ಪ್ರಕಟಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: