ಮೈಸೂರು

ಗಲ್ಫ್ ರಾಷ್ಟ್ರಗಳಂತೆ ನಮ್ಮಲ್ಲೂ ಕಠೋರ ಶಿಕ್ಷೆ ವಿಧಿಸಿದಾಗ ಮಾತ್ರ ಅತ್ಯಾಚಾರ ತಡೆಯಲು ಸಾಧ್ಯ : ಮಲ್ಲಿಗೆ ವೀರೇಶ್ ಅಭಿಮತ

ತಪ್ಪಿತಸ‍್ಥರಿಗೆ ಗಲ್ಫ್ ರಾಷ್ಟ್ರ ಗಳಲ್ಲಿ ನೀಡಲಾಗುವ ಕಠೋರ ಶಿಕ್ಷೆಯನ್ನು ನಮ್ಮ ದೇಶದಲ್ಲೂ ವಿಧಿಸಿದಾಗ ಮಾತ್ರ ಹೆಣ್ಣಿನ ಮೇಲಿನ ಅತ್ಯಾಚಾರ ದೌರ್ಜನ್ಯಗಳನ್ನು ತಡೆಯಲು ಸಾಧ‍್ಯ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ‍್ಯಕ್ಷೆ ಮಲ್ಲಿಗೆ ವೀರೇಶ್ ಅಭಿಪ್ರಾಯಪಟ್ಟರು.

ಕರ್ನಾಟಕ ಸೇನಾ ಪಡೆ ವತಿಯಿಂದ ಶುಕ್ರವಾರ ಜೆ.ಎಲ್.ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಕ್ಷೇತ್ರಗಳ ಸಾಧಕ ಮಹಿಳೆಯರಿಗೆ ಸನ್ಮಾನ ಸಮಾರಂಭ ಹಾಗೂ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು ಬಳಿಕ ಮಾತನಾಡಿ ಅವರು,ಮಹಿಳೆ ಇಂದು ಒಂಟಿಯಾಗಿ ತಿರುಗಾಡಲು ಕಷ್ಟವಾಗಿದೆ. ಅತ್ಯಾಚಾರ, ದೌರ್ಜನ್ಯಗಳು ಹೆಚ್ಚಾಗಿ  ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ದೇಶದಲ್ಲಿ ಕಟ್ಟುನಿಟ್ಟಾದ ಕಾನೂನು ಕ್ರಮಗಳನ್ನು ಜಾರಿಗೆ ತಂದಾಗ ಇಂತಹ ಕೃತ್ಯಗಳನ್ನು ತಡೆಯಬಹುದಾಗಿದೆ ಎಂದರು.

1909 ರಲ್ಲಿ ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಮಹಿಳೆಯರು ಅವಕಾಶಗಳನ್ನು ಕೋರಿ ಮೊದಲ ಬಾರಿಗೆ ಹೋರಾಟ ಪ್ರಾರಂಭಿಸಿದರು.  1914 ರ ನಂತರ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು ನಿರ್ಧಾರ ಮಾಡಲಾಯಿತು. ಅಂದಿನಿಂದ ಎಲ್ಲಾ ದೇಶಗಳಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಮಹಿಳೆಯರು ಇಂದಿಗೂ ತಮ್ಮ ಹಕ್ಕು ಮತ್ತು ಸಮಾನತೆಗಾಗಿ ಹೋರಾಟಗಳನ್ನು ಮಾಡುತ್ತಲೇ ಇದ್ದಾರೆ. ಲೋಕಭೆಯಲ್ಲಿ ಮೀಸಲಾತಿಗಾಗಿ ಎಷ್ಟೇ ಹೋರಾಟ ಮಾಡುತ್ತಿದ್ದರೂ ಸಹ ಬಿಲ್ ಪಾಸ್ ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.

ಟಿವಿ ಚಾನಲ್ ಗಳಲ್ಲಿ ಬಿತ್ತರವಾಗುವ ಜಾಹೀರಾತುಗಳಲ್ಲಿ ಮಹಿಳೆಯರನ್ನು ಅಶ್ಲೀಲ ರೀತಿಯಾಗಿ ತೋರಿಸುವ ಮೂಲಕ ಸ್ತ್ರೀ ಕುಲಕ್ಕೆ ಮುಜುಗರ ಉಂಟು ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂಗೀತ ವಿವಿಯ ಕುಲಪತಿ ಡಾ.ಸರ್ವಮಂಗಳ ಶಂಕರ್ ಮಾತನಾಡಿ, ಮಹಿಳಾ ದಿನಾಚರಣೆ ಮಾರ್ಚ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ವರ್ಷವಿಡೀ ಮಹಿಳಾ ದಿನಾಚರಣೆ ಮಾಡಬೇಕು. ಅದರಲ್ಲೂ ಪುರುಷರು ಮಹಿಳೆಯರಿಗೆ ಪ್ರೋತ್ಸಾಹ ಸಹಕಾರ ನೀಡಬೇಕು. ಗಂಡು-ಹೆಣ್ಣು ಸಂಸಾರ ಎಂಬ ರಥಕ್ಕೆ ಗಾಲಿಗಳಿದ್ದಂತೆ. ಇಬ್ಬರೂ ಸಹ ಸಹಬಾಳ್ವೆ ನಡೆಸಿದಾಗ ಸಂಸಾರ ಸುಖಮಯವಾಗಿರುತ್ತದೆ ಎಂದರು.

ಮಹಿ ಮತ್ತು ಇಳೆ ಎಂಬ ಎರಡು ಪದಗಳಿಗೆ  ಭೂಮಿ ಎಂಬ ಅರ್ಥವಿದೆ. ಅಂದರೆ ಒಬ್ಬ ಮಹಿಳೆ ಎರಡು ಭೂಮಿಗಳ ಸಾಮರ್ಥ್ಯ ಹೊಂದಿದ್ದಾಳೆ ಎಂದರ್ಥ. ಒಂದು ಹೆಣ್ಣು ತನ್ನ ಸಂಸಾರ ನೌಕೆಯನ್ನು ಸಮತೋಲನದಲ್ಲಿರಿಸಲು ಅವಿರತವಾಗಿ ದುಡಿದು ನಿಸ್ವಾರ್ಥ ಸೇವೆ ಸಲ್ಲಿಸುತ್ತಾಳೆ. ಅಲ್ಲದೇ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ಇತರರಿಗೆ ಮಾದರಿಯಾಗುತ್ತಾಳೆ ಎಂದರು.

ನಂತರ ವಿವಿಧ ಕ್ಷೇತ್ರಗಳ ಸಾಧಕರಾದ  ಪ್ರೊ.ಎಸ್.ಎ.ಕಮಲಾ ಜೈನ್, ಡಾ.ಟಿ.ಸಿ.ಪೂರ್ಣಿಮಾ, ಶ್ವೇತ ಚರಣ್ ರಾಜ್, ಎಂ.ಮಹದೇವಮ್ಮ, ಡಾ.ಪುಷ್ಪಾ ಅಯ್ಯಂಗಾರ್, ಎಸ್.ಎಸ್.ಕಾತ್ಯಾಯಿನಿ ದೇವಿ, ಬಿ.ಆರ್.ಸಬಿತ, ಪಾರ್ವತಿ ಇವರಿಗೆ  ಸನ್ಮಾನ ಮಾಡಿ ಗೌರವಿಸಲಾಯಿತು. ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಉಪಮಹಾಪೌರರಾದ ರತ್ನ ಲಕ್ಷ್ಮಣ್, ಜಿ.ಪಂ.ಅಧ್ಯಕ್ಷೆ ನಯಿಮಾ ಸುಲ್ತಾನಾ, ಬ್ರಾಹ್ಮಣ ಸಭಾದ ಜಿಲ್ಲಾಧ‍್ಯಕ್ಷ ಬಿ.ಆರ್.ನಟರಾಜ್ ಜೋಯಿಸ್, ಸಮಾಜ ಸೇವಕ ಕೆ.ಬಿ.ನಾಗಭೂಷಣ್, ಕರ್ನಾಟಕ ಸೇನಾ ಪಡೆಯ ರಾಜ್ಯಾಧ‍್ಯಕ್ಷ ಚಾ.ರಂ. ಶ್ರೀನಿವಾಸಗೌಡ ಮತ್ತಿತರರು ಉಪಸ್ಥಿತರಿದ್ದರು. ( ಎಲ್.ಜಿ-ಎಸ್.ಎಚ್)

 

 

Leave a Reply

comments

Related Articles

error: