ಮೈಸೂರು

ಪೊಲೀಸ್‌ ಠಾಣೆ ಮೆಟ್ಟಿಲೇರಿದ ಮೈಸೂರು ವಕೀಲರ ಸಂಘದ ಆಂತರಿಕ ಬೆಳವಣಿಗೆ : ಇಬ್ಬರು ವಕೀಲರು-ಮಂಜುಳಾ ಮಾನಸರಿಂದ ದೂರು-ಪ್ರತಿದೂರು ದಾಖಲು

ಮೈಸೂರು, ಜ.25:- ಮೈಸೂರು ವಕೀಲರ ಸಂಘದ ಆಂತರಿಕ ಬೆಳವಣಿಗೆಗಳು ಇದೀಗ ಪೊಲೀಸ್‌ ಠಾಣೆ ಮೆಟ್ಟಿಲೇರಿವೆ.   ಮೈಸೂರು ವಕೀಲರ ಸಂಘದಿಂದ ಅಮಾನತುಗೊಂಡಿರುವ  ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ, ಪ್ರದೇಶ ಕಾಂಗ್ರೆಸ್‌ ಸಮಿತಿ ವಕ್ತಾರೆ ಮಂಜುಳಾ ಮಾನಸ   ಇಬ್ಬರು ವಕೀಲರ ವಿರುದ್ಧ  ಲಕ್ಷ್ಮಿಪುರಂ ಪೊಲೀಸ್‌ ಠಾಣೆಗೆ ದೂರು ನೀಡಿದ ಬೆನ್ನಲ್ಲೇ ಇದಕ್ಕೆ ಪ್ರತಿಯಾಗಿ ಈ ಇಬ್ಬರು ವಕೀಲರು ಮಂಜುಳಾ ಮಾನಸ ವಿರುದ್ಧ ಪ್ರತಿ ದೂರು ನೀಡಿದ್ದಾರೆ. ಮೊದಲು ದೂರು-ಪ್ರತಿದೂರುಗಳನ್ನು ಮೈಸೂರು ವಕೀಲರ ಸಂಘದ ಅಧ್ಯಕ್ಷರಿಗೆ ನೀಡಲಾಗಿತ್ತು. ನಂತರ ದೂರು-ಪ್ರತಿದೂರುಗಳು ಪೊಲೀಸ್‌ ಠಾಣೆಯ ಮೆಟ್ಟಿಲೇರಿವೆ.

ಮೈಸೂರಿನಲ್ಲಿ ಇತ್ತೀಚೆಗೆ ಮೈಸೂರು ವಿವಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ’ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿ ದೇಶದ್ರೋಹದ ಆರೋಪ ಹೊತ್ತವರ ಪರ ವಕಾಲತು ವಹಿಸಬಾರದೆಂದು ಮೈಸೂರು ವಕೀಲರ ಸಂಘ ಜ.20ರಂದು ನಿರ್ಣಯ ಕೈಗೊಂಡಿತ್ತು. ಈ ನಿರ್ಣಯ ಕೈಗೊಂಡ ಸಭೆಯಲ್ಲಿ ತಮ್ಮನ್ನು ಧ್ವನಿ ಏರಿಸಿ ನಿಂದಿಸಲಾಗಿದೆ. ತಮ್ಮ ಮೇಲೆ ಹಲ್ಲೆ ನಡೆಸಲು ಮುಂದಾದರೆಂದು ದೂರಿ ವಕೀಲರಾದ ವೆಂಕಟೇಶ್‌ ಹಾಗೂ ವಿನಯ್‌ ವಿರುದ್ಧ ಮಂಜುಳಾ ಮಾನಸ ಅವರು ಗುರುವಾರ ಲಕ್ಷ್ಮಿಪುರಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ವಕೀಲರಾದ ವೆಂಕಟೇಶ್‌ ಹಾಗೂ ವಿನಯ್‌ ಅವರೂ ಮಂಜುಳಾ ಮಾನಸ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಮಧ್ಯೆ ಮೈಸೂರು ವಕೀಲರ ಸಂಘದ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದ್ದಾರೆಂದು ವಕೀಲರ ಸಂಘದಿಂದ ಸಸ್ಪೆಂಡ್‌ ಆಗಿರುವ ಮಂಜುಳಾ ಮಾನಸ ಅವರು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿ, ದೇಶದಲ್ಲಿ ಇಂದು ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿತಮ್ಮನ್ನು ಸಾರ್ವಜನಿಕವಾಗಿ ಕಣ್ಣೀರು ಹಾಕಿಸಿ ಪೊಲೀಸ್‌ ಠಾಣೆ ಮೆಟ್ಟಿಲೇರುವಂತೆ ಮಾಡಲಾಗಿದೆ. ಈ ಸಂದರ್ಭವೂ ಮಹಿಳಾ ದೌರ್ಜನ್ಯದ ವ್ಯಾಪ್ತಿಗೆ ಒಳಪಡುತ್ತದೆ ಎಂದಿದ್ದಾರೆ.

ಮೈಸೂರು ವಕೀಲರ ಸಂಘದ ಬಹಿಷ್ಕಾರವೂ ಸಾಮಾಜಿಕ ಬಹಿಷ್ಕಾರದಷ್ಟೇ ಅಪಾಯ. ಸಂಘದ ಗೌರವಕ್ಕೆ ಧಕ್ಕೆಯಾಗುವಂತಹ ಯಾವುದೇ ಹೇಳಿಕೆಯನ್ನು ತಾವು ಮಾಧ್ಯಮಕ್ಕೆ ನೀಡಿಲ್ಲ. ಆದರೂ ತಮ್ಮನ್ನು ಸಂಘದಿಂದ ಅಮಾನತುಪಡಿಸಲಾಗಿದೆ ಎಂದು ಹೇಳಿದ್ದಾರೆ.

ವಕೀಲರ ಸಂಘವು ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿರುವುದು ವಕೀಲರ ಸಂಘದ ಘನತೆಗೆ ಕುಂದು ತಂದಿದೆ. ಸಿದ್ದರಾಮಯ್ಯ ಮೈಸೂರು ವಕೀಲರ ಸಂಘದ ಅಜೀವ ಸದಸ್ಯರಾಗಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ವಕೀಲರ ಸಂಘದ ಆಶೋತ್ತರಗಳಿಗೆ ಸ್ಪಂದಿಸಿ ನ್ಯಾಯಾಲಯದ ಆವರಣದೊಳಗೆ ಕ್ಯಾಂಟೀನ್‌, ನ್ಯಾಯಾಲಯದ ಸಂಕೀರ್ಣಗಳಿಗೆ ಸರಕಾರದಿಂದ ಅನುದಾನ ಒದಗಿಸಿದ್ದಾರೆ. ವಕೀಲ ವೃತ್ತಿಗೆ ಅವಮಾನವಾಗುವಂತಹ ಹೇಳಿಕೆಯನ್ನು ಅವರು ನೀಡಿಲ್ಲ ಎಂದು ಮಂಜುಳಾ ಮಾನಸ ಹೇಳಿದ್ದಾರೆ.

ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್‌.ಆನಂದಕುಮಾರ್‌ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿ, ದೇಶದ್ರೋಹ ಆರೋಪ ಹೊತ್ತ ನಳಿನಿ ಪರ ನೂರಕ್ಕೂ ಹೆಚ್ಚು ವಕೀಲರು ವಕಾಲತು ಹಾಕಿದ್ದರು. ಇವರಲ್ಲಿ ಸುಮಾರು 65 ವಕೀಲರು ವಕಾಲತಿನಿಂದ ನಿವೃತ್ತಿಯಾಗುವುದಾಗಿ ಸಂಘಕ್ಕೆ ತಿಳಿಸಿದ್ದಾರೆ. ಸಂಘದ ನಿರ್ಣಯಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದಾರೆ. ಮೈಸೂರು ವಕೀಲರ ಸಂಘದ ಇನ್ನೂ ಕೆಲವು ಸದಸ್ಯರು ನಳಿನಿ ಪರ ವಕಾಲತು ವಹಿಸಿದ್ದಾರೆ. ಅಂತಹ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಸಂಘದ ಸದಸ್ಯರ ಸಭೆ ಕರೆದು ಚರ್ಚಿಸಿ ತೀರ್ಮಾನಿಸಲಾಗುವುದು ಎಂದಿದ್ದಾರೆ.

ಸಿದ್ದರಾಮಯ್ಯ ಅವರು, ನಳಿನಿ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ್ದು ದೇಶದ್ರೋಹ ಅಲ್ಲ. ಮೈಸೂರಿನ ಕೆಲವು ವಕೀಲರು ಗೂಂಡಾಗಿರಿ ನಡೆಸಿದ್ದಾರೆಂಬ ಳಿಕೆ ನೀಡಿದ್ದನ್ನು ಖಂಡಿಸಿ ಗುರುವಾರ ಮೈಸೂರು ವಕೀಲರ ಸಂಘವು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿತ್ತು. ಸಿದ್ದರಾಮಯ್ಯ ಅವರ ಈ ಹೇಳಿಕೆಯನ್ನು ಖಂಡಿಸಿ ಶುಕ್ರವಾರ ಕೆ.ಆರ್‌.ನಗರದಲ್ಲಿ ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: