ಮೈಸೂರು

ದೇಶದ ಭವಿಷ್ಯ ಕಟ್ಟುವಲ್ಲಿ ಯುವಕರ ಪಾತ್ರ ಅತ್ಯಂತ ಮುಖ್ಯ : ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ

'ರಾಷ್ಟ್ರೀಯ ಮತದಾರರ ದಿನಾಚರಣೆ' ಕಾರ್ಯಕ್ರಮ

ಮೈಸೂರು,ಜ.25:- ದೇಶದ ಭವಿಷ್ಯ ಕಟ್ಟುವಲ್ಲಿ ಯುವಕರ ಪಾತ್ರ ಅತ್ಯಂತ ಮುಖ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಕೆ.ವಂಟಿಗೋಡಿ ತಿಳಿಸಿದರು.

ಅವರಿಂದು ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ   ‘ರಾಷ್ಟ್ರೀಯ ಮತದಾರರ ದಿನಾಚರಣೆ’ ಕಾರ್ಯಕ್ರಮದ ಪ್ರಯುಕ್ತ ರಂಗಾಚಾರ್ಲು ಪುರಭವನದಲ್ಲಿ ವೇದಿಕೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.

ಜ.25ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಶೇ.30ರಷ್ಟು ಯುವ ಸಮುದಾಯವನ್ನು ಈ ದೇಶ ಹೊಂದಿದೆ. ದೇಶದ ಭವಿಷ್ಯ ಕಟ್ಟುವಲ್ಲಿ ಯುವಕರ ಪಾತ್ರ ಅತ್ಯಂತ ಮುಖ್ಯ. ವಯಸ್ಕರಾದಲ್ಲಿ ಮತದಾನ ಮಾಡುವ ಉತ್ಸುಕತೆ ಇರತ್ತೆ. ಮತದಾನದ ಮಹತ್ವವನ್ನು ಅರಿತು ಸರಿಯಾಗಿ ತಿಳಿದುಕೊಂಡು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಎಂದು ಹೊಸದಾಗಿ ಈ ಬಾರಿ ಮತದಾನದ ಹಕ್ಕು ಪಡೆದುಕೊಂಡ ಯುವಜನತೆಗೆ ಮನವಿ ಮಾಡಿದರು.

ಮತದಾನ ಪ್ರಮುಖವಾದ, ಮಹತ್ವವಾದ, ಅತಿ ಪೂಜ್ಯವಾದ ಒಂದು ಹಕ್ಕು. ಯಾಕೆಂದರೆ ನಮ್ಮ  ಒಂದು ಮತದಾನ ಈ ದೇಶದ ಭವಿಷ್ಯವನ್ನೇ ನಿರ್ಧರಿಸತ್ತೆ. ಇವತ್ತು ದೇಶದಲ್ಲಿ, ರಾಜ್ಯದಲ್ಲಿ ಯಾವುದೇ ಒಂದು ಸರ್ಕಾರ ಆಡಳಿತ ನಡೆಸಲು ಪ್ರತಿಯೊಬ್ಬರು ಮಾಡಿದ ಮತದಾನದಿಂದ ನಿರ್ಧಾರವಾಗಲಿದೆ. ಆದ್ದರಿಂದ ನಮ್ಮ ಒಂದೇ ಮತದಿಂದ ಏನಾಗಬಹುದು, ಮೆಜಾರಿಟಿ ಬರಲಿಕ್ಕಿಲ್ಲ,  ಅಥವಾ ನಾವು ಹಾಕದಿದ್ದರೆ ಬಹಳಷ್ಟು ಏನು ಪಡೆಯಲ್ಲ ಅಂತ ಭಾವಿಸದೇ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು. ಯಾರಿಗೆ ಮತ ಚಲಾಯಿಸಬೇಕು ಎಂಬುದನ್ನು ತಿಳಿದುಕೊಂಡು ಮತ ಚಲಾಯಿಸಿದರೆ ದೇಶದ ಅಭಿವೃದ್ಧಿಗೆ ಕೊಟ್ಟ ಕೊಡುಗೆಯಾಗಲಿದೆ ಎಂದರು.

ಜಾತಿ ಮತ ಭೇದ ಪಂಥಗಳ ಆಮಿಷಕ್ಕೆ ಬಲಿಯಾಗದೆ ಮತ ಚಲಾಯಿಸಬೇಕು. ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಮತದಾನದಲ್ಲಿ ಸಂಪೂರ್ಣ ಭಾಗವಹಿಸೋಣ. ಹಳ್ಳಿಗಳಲ್ಲಿ ಶೇಕಡಾವಾರು ಮತದಾನ ಹೆಚ್ಚು ಆಗತ್ತೆ. ಆದರೆ ನಗರಗಳಲ್ಲಿ ಆಗಲ್ಲ. ಯಾಕೆ ಹೀಗೆ ಆಗುತ್ತಿದೆ ಎಂದು ಚಿಂತನೆ ನಡೆದಿದೆ. ಮತದಾನದ ದಿನ  ರಜೆ ಇರತ್ತೆ. ನಗರದ ಜನರು ಯಾವುದೋ ಕಾರ್ಯಕ್ರಮ ಹಾಕಿ ಪ್ರವಾಸ ಹೋಗುವುದೋ, ಮನೆಯಲ್ಲಿ ಕುಳಿತು ರೆಸ್ಟ್ ತೆಗೆದುಕೊಳ್ಳುವುದು ಮಾಡುತ್ತಾರೆ. ಮತದಾನ ಅಂದರೆ ಅಸಡ್ಡೆ. ನಗರದಲ್ಲಿರುವವರು ಶಿಕ್ಷಿತರಾಗಿರುತ್ತಾರೆ. ಅವರೇ ಮತದಾನ ಮಾಡಿಲ್ಲ ಅಂದರೆ ಮತದಾನದ ಮಹತ್ವ ತಿಳಿದಿಲ್ಲ ಅಂತ ಅರ್ಥ. ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿ ಒಳ್ಳೆಯ ಸರ್ಕಾರ ನಿರ್ಧರಿಸಿದರೆ ದೇಶದ ಅಭ್ಯುದಯವಾಗಲಿದ್ದು, ನಮ್ಮದೇ ಕೊಡುಗೆ ನೀಡಿದಂತಾಗುತ್ತದೆ. ನೀವು ಮತದಾನದ ಕುರಿತು ನಿಮ್ಮ ಸ್ಹೇಹಿತರಿಗೆ, ಅಕ್ಕಪಕ್ಕದವರಿಗೆ, ಸಂಬಂಧಿಕರಿಗೆ ಅರಿವು ಮೂಡಿಸಿ ಶೇ.100ರಷ್ಟು ಮತದಾನದಲ್ಲಿ ಭಾಗಿಯಾಗಿ ಎಂದರು.

ಈ ಬಾರಿ ಮತಚಲಾಯಿಸುವ ಹಕ್ಕನ್ನು ಪಡೆದ ಯುವ ಮತದಾರರಿಗೆ ಮತದಾನದ ಗುರುತಿನ ಚೀಟಿ ವಿತರಿಸಲಾಯಿತು.

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಪೂರ್ಣೀಮಾ ಪ್ರತಿಜ್ಞಾ ವಿಧಿ ಬೋಧಿಸಿದರು. ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಜಾಥಾಕ್ಕೆ ಚಾಲನೆ ನೀಡಲಾಗಿದ್ದು, ಪ್ರಮುಖ ಬೀದಿಗಳಲ್ಲಿ ಸಾಗಿ ವಿದ್ಯಾರ್ಥಿಗಳು  ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸಿದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: