ಮೈಸೂರು

ಮೈಸೂರು ವಿವಿ ಜತೆ ಸಹಭಾಗಿತ್ವಕ್ಕೆ ಮುಂದಾದ ಸಾಲ್ಫೋರ್ಡ್ ವಿಶ್ವವಿದ್ಯಾಲಯ

ಮೈಸೂರು,ಜ.26:-  ಇಂಗ್ಲೆಂಡ್‌ನ ಗ್ರೇಟರ್ ಮ್ಯಾಂಚೆಸ್ಟರ್‌ನ ಸಾಲ್ಫೋರ್ಡ್‌ ನಗರದಲ್ಲಿರುವ ಸಾಲ್ಫೋರ್ಡ್ ವಿಶ್ವವಿದ್ಯಾಲಯವು ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾದ ಮೈಸೂರು ವಿವಿ ಜತೆ ಸಹಭಾಗಿತ್ವಕ್ಕೆ ಮುಂದಾಗಿದೆ.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ನಿಯೋಗ ಮತ್ತು ಮೈಸೂರು ವಿವಿ, ವಿಟಿಯು, ದಾವಣಗರೆ ವಿಶ್ವವಿದ್ಯಾಲಯದ ಉಪಕುಲಪತಿಗಳು ಕರ್ನಾಟಕದ ಸಹಯೋಗಕ್ಕೆ ಸಂಬಂಧಿಸಿದಂತೆ ಜನವರಿ 21 ರಿಂದ 23 ರವರೆಗೆ ಸಾಲ್ಫೋರ್ಡ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹೆಲನ್ ಮರ್ಶಲ್ ಜತೆಗೆ ಸರಣಿ ಚರ್ಚೆ ನಡೆಸಿದರು.

ಈ ವೇಳೆ ಮೈಸೂರು ವಿವಿ ಕುಲಪತಿ ಫ್ರೊ. ಜಿ ಹೇಮಂತ ಕುಮಾರ್ ಅವರ ಪ್ರಸ್ತಾವನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಾಲ್ಫೋರ್ಡ್ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಹೆಲನ್ ಮರ್ಶಲ್ , ಮೈಸೂರು ವಿವಿ ಜತೆಗೆ ಸಹಭಾಗಿತ್ವಕ್ಕೆ ಹಸಿರು ನಿಶಾನೆ ತೋರಿಸಿದರು.

ಆರಂಭದಲ್ಲಿ ಸಾಲ್ಫೋರ್ಡ್ ವಿಶ್ವವಿದ್ಯಾಲಯವು ಈ ಕೆಳಗಿನ ಕ್ಷೇತ್ರಗಳಲ್ಲಿ ಸಹಕರಿಸಲು ಮುಂದಾಗಿದೆ

ಸುಧಾರಿತ ಪ್ರದೇಶಗಳಲ್ಲಿ ಶಿಕ್ಷಕರ ತರಬೇತಿ ಕಾರ್ಯಕ್ರಮ ( Teacher training program in Advanced areas)

ನೈಸರ್ಗಿಕ ವಿಜ್ಞಾನ ವಿಭಾಗದೊಂದಿಗೆ ಸುಧಾರಿತ ಸಂಶೋಧನೆ ( Advanced research with Natural science department )

ನಿರ್ವಹಣೆ ಮತ್ತು ಮಾಧ್ಯಮ ಸಂವಹನ (Management and Media Communications )

ಈ ಎಲ್ಲಾ ಜಂಟಿ ಕಾರ್ಯಕ್ರಮಗಳಿಗೆ ಅವಶ್ಯಕವಿರುವ ಆರ್ಥಿಕ ಸಹಾಯಕ್ಕಾಗಿ ಇಂಗ್ಲೆಂಡ್ ಸರ್ಕಾರಕ್ಕೆ ಜಂಟಿ ಪ್ರಸ್ತಾವನೆಯನ್ನು ಸಲ್ಲಿಸಲು ತೀರ್ಮಾನಿಸಲಾಯಿತು.

ಜತೆಗೆ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ ಮತ್ತು ಸಂಶೋಧನಾ ಕಾರ್ಯಕ್ರಮಗಳನ್ನು ಅನ್ವೇಷಿಸಲು, ಹಾಗೂ ನಿರ್ವಹಣೆ ಮತ್ತು ಇತರ ಸಂಬಂಧಿತ ವಿಷಯಗಳಲ್ಲಿ ಅವಳಿ ಪದವಿ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲು ಸಹ ಈ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: