ಕ್ರೀಡೆ

ಟೀಂ ಇಂಡಿಯಾ ಬಸ್ ನಲ್ಲಿ ಧೋನಿ ಸೀಟ್ ನಲ್ಲಿ ಯಾರು ಕೂರುವುದಿಲ್ಲ!: ಚಹಲ್ ಟಿವಿಯಲ್ಲಿ ಬಹಿರಂಗ

ನವದೆಹಲಿ,ಜ.28-ಟೀಂ ಇಂಡಿಯಾದ ಮಾಜಿ ನಾಯಕ, ಅನುಭವಿ ಆಟಗಾರ ಎಂ.ಎಸ್.ಧೋನಿ ತಂಡಕ್ಕೆ ಮರಳಿ ಬರುವಿಕೆಗಾಗಿ ಅಭಿಮಾನಿಗಳು ಮಾತ್ರವಲ್ಲದೆ, ತಂಡದ ಆಟಗಾರರು ಸಹ ಕಾಯುತ್ತಿದ್ದಾರೆ.

ಟೀಂ ಇಂಡಿಯಾ ಬಸ್ ನಲ್ಲಿ ಧೋನಿಗೆ ಮೀಸಲಿಟ್ಟ ಸೀಟ್ ನಲ್ಲಿ ಯಾರೂ ಕುಳಿತುಕೊಳ್ಳುವುದಿಲ್ಲ. ಈ ವಿಚಾರ ಬಿಸಿಸಿಐನ ಸೋಷಿಯಲ್‌ ಮೀಡಿಯಾ ಸಲುವಾಗಿ ಭಾರತ ತಂಡದ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್ ನಡೆಸಿಕೊಡುವ ಚಹಲ್ ಟಿವಿ ಕಾರ್ಯಕ್ರಮದಲ್ಲಿ ಬೆಳಕಿಗೆ ಬಂದಿದೆ.

ಭಾರತ ತಂಡ ಸದ್ಯ ನ್ಯೂಜಿಲೆಂಡ್‌ ಪ್ರವಾಸದಲ್ಲಿದ್ದು ಚಹಲ್‌ ತಮ್ಮ ಕಾರ್ಯಕ್ರಮದಲ್ಲಿ ಭಾರತ ತಂಡದ ಬಸ್‌ನ ಒಳಗಿನ ನೋಟವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.

ಈ ವೇಳೆ ಭಾರತ ತಂಡ ಎಲ್ಲೇ ಹೋದರೂ ತಂಡದ ಬಸ್‌ನ ಹಿಂಬದಿಯಲ್ಲಿರುವ ಬಲ ಭಾಗದ ಕಾರ್ನರ್‌ ಸೀಟ್‌ ಮಾಜಿ ನಾಯಕ ಎಂಎಸ್‌ ಧೋನಿ ಅವರಿಗೆ ಮೀಸಲಿಟ್ಟಿರುವ ಸಂಗತಿ ಬಹಿರಂಗವಾಗಿದೆ. ಈಗಲೂ ತಂಡದ ಆಟಗಾರರು ಧೋನಿ ಬರುವಿಕೆಯನ್ನು ಎದುರು ನೋಡುತ್ತಿದ್ದು, ಅವರಿಗೆ ಮೀಸಲಿಟ್ಟಿರುವ ಸೀಟ್‌ನಲ್ಲಿ ಯಾರೊಬ್ಬರೂ ಕುಳಿತುಕೊಳ್ಳುವುದಿಲ್ಲ ಅದು ಖಾಲಿ ಉಳಿದಿರುತ್ತದೆ ಎಂದು ಚಹಲ್‌ ಹೇಳಿದ್ದಾರೆ.

ಚಹಲ್‌ ಟಿವಿಯಲ್ಲಿ ಈವರೆಗೆ ಒಬ್ಬ ಆಟಗಾರ ಮಾತ್ರ ಕಾಣಿಸಿಕೊಂಡಿಲ್ಲ. ಒಂದೆರಡು ಬಾರಿ ಅವರು ಬರಲು ಮನಸ್ಸು ಮಾಡಿ ನನಗೆ ಮನವಿ ಮಾಡಿದ್ದರು ಕೂಡ. ಆದರೆ ನಾನೇ ಈಗ ಬೇಡವೆಂದಿದ್ದೆ. ಆ ದಿಗ್ಗಜ ಆಟಗಾರ ಬೇರಾರು ಅಲ್ಲ ಅವರು ಧೋನಿ. ಅವರು ಸದಾ ಇದೇ ಸೀಟ್‌ನಲ್ಲಿ ಕುಳಿತುಕೊಳ್ಳುತ್ತಿದ್ದರು. ಈಗ ಈ ಸೀಟ್‌ನಲ್ಲಿ ಬೇರೆ ಯಾರೂ ಕುಳಿತುಕೊಳ್ಳುವುದಿಲ್ಲ. ನಾವೆಲ್ಲರೂ ಅವರನ್ನು ಬಹಳ ಮಿಸ್‌ ಮಾಡ್ಕೊತೀವಿ ಎಂದು ಚಹಲ್‌ ಹೇಳಿದ್ದಾರೆ.

ಚಹಲ್‌ ಟಿವಿಯಲ್ಲಿ ಯುಜ್ವೇಂದರ್‌ ಭಾರತ ತಂಡದ ಸ್ಟಾರ್‌ಗಳಾದ ರಿಷಭ್‌ ಪಂತ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ಕೆಎಲ್‌ ರಾಹುಲ್‌ ಮತ್ತು ಕುಲ್ದೀಪ್‌ ಯಾದವ್‌ ಅವರೊಟ್ಟಿಗೆ ಸಂಭಾಷಣೆ ನಡೆಸಿ ಹಲವು ಪ್ರಶ್ನೆಗಳಿಗೆ ಉತ್ತರ ಕೇಳಿ ಪಡೆದಿದ್ದಾರೆ.

2019ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋತ ಬಳಿಕ ಎಂ.ಎಸ್‌.ಧೋನಿ ಕ್ರಿಕೆಟ್ ನಿಂದ ಅನಿರ್ಧಿಷ್ಟಾವಧಿ ಕಾಲ ವಿಶ್ರಾಂತಿ ಮೊರೆ ಹೋಗಿದ್ದಾರೆ. ಧೋನಿ ತಂಡಕ್ಕೆ ಮರಳಿ ಬರುವುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಇದೇ ವೇಳೆ ಧೋನಿ ಏಕದಿನ ಕ್ರಿಕೆಟ್‌ಗೆ ಶೀಘ್ರದಲ್ಲೇ ನಿವೃತ್ತಿ ಘೋಷಿಸಲಿದ್ದು, ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವ ಕುರಿತಾಗಿ ಭಾರತ ತಂಡದ ಮುಖ್ಯ ಕೋಚ್‌ ರವಿ ಶಾಸ್ತ್ರಿ ಹೇಳಿದ್ದರು. ಮುಂಬರುವ ಐಪಿಎಲ್‌ನಲ್ಲಿ ಧೋನಿ ಆಡುವುದು ನಿಶ್ಚಿತವಾಗಿದ್ದು, ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಅಬ್ಬರಿಸಿದರೆ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಧೋನಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಲಿದೆ. (ಎಂ.ಎನ್)

 

Leave a Reply

comments

Related Articles

error: